
ಬೆಳಗಾವಿ: ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಕರವೇ ನಾರಾಣಗೌಡ ಬಣದ ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದಾರೆ. ಬಾಗಲಕೋಟೆ-ಬೇಳಗಾವಿ ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು, ಎಂಇಎಸ್ ಪುಂಡರ ಅಣಕು ಶವ ಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆಯಲ್ಲಿಯೇ ಕುಳಿತು ಧರಣಿ ನಡೆಸಿ ಎಂಇಎಸ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಎಂಇಎಸ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪೊಲೀಸರು ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.