
ಬೆಳಗಾವಿ: ಮರಾಠಿ ಬರಲ್ಲ ಕನ್ನಡದಲ್ಲಿ ಮಾತನಡಿ ಎಂದಿದ್ದಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಕರವೇ ಹೋರಾಟ ಉಗ್ರ ಸ್ವರೂಪ ಪಡೆದಿದೆ.
ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು, ಎಂಇಎಸ್ ಹಾಗೂ ಶಿವಸೇನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ನೆಲದಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಎಂಇಎಸ್ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪ್ರವೀಣ್ ಶೆಟ್ಟಿ, ಬೆಳಗಾವಿ ನಮ್ಮದು. ನಮ್ಮ ಕರ್ನಾಟಕದಲ್ಲಿಯೇ ಮರಾಠಿ ಪುಂಡರು, ಎಂಇಎಸ್ ನವರು ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ತರ್ ಮೇಲೆ ಹಲ್ಲೆ ನಡೆಸಿ, ಮರಾಠಿ ಮಾತನಾಡುವಂತೆ, ಮಹಾರಾಷ್ಟ್ರದ ಪರ ಘೋಷಣೆ ಕೂಗುವ ಹೇಳುತ್ತಿರುವುದು ಉದ್ಧಟತನ. ಕನ್ನಡಿಗರು, ಕರ್ನಾಟಕದವರು ಯಾವತ್ತೂ ಮಹಾರಾಷ್ಟ್ರಕ್ಕೆ ನುಗ್ಗಿ ಈ ರೀತಿ ಎಂದೂ ನಡೆದುಕೊಂಡಿಲ್ಲ. ಆದರೆ ಮರಾಠಿಗರು, ಎಂಇಎಸ್ ನವರು ಬೆಳಗಾವಿಗೆ ಬಂದು ಹಲ್ಲೆ ನಡೆಸುತ್ತಿರುವುದು ಖಂಡನೀಯ. ಪೊಲೀಸ್ ಇಲಕಹೆ, ಜಿಲ್ಲಾಡಳಿತ ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಪ್ರವೀಣ್ ಶೆಟ್ಟಿ ನೇತೃತ್ವದಲ್ಲಿ ಕರವೇ ಕಾರ್ಯಕರರು ಜಿಲ್ಲಾಧಿಕಾರಿ ಕಚೇರಿಯತ್ತ ಮೆರವಾಣಿಗೆ ಮೂಲಕ ಸಾಗಲು ಮುಂದಾಗಿದ್ದು, ದಾರಿ ಮಧ್ಯೆಯೇ ತಡೆದ ಪೊಲೀಸರು ಪ್ರವೀಣ್ ಶೆಟ್ಟಿ ಸೇರಿದಂತೆ ಹಲವು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.