
ಬೆಂಗಳೂರು: ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರ ಹಲ್ಲೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಮಂಗಳವಾರ ಬೆಳಗಾವಿಯಲ್ಲಿ ಕರವೇ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು, ಬೆಳಗಾವಿ ಕನ್ನಡಿಗರೆಲ್ಲರೂ ಭಾಗಿಯಾಗುವಂತೆ ಕರೆ ನೀಡಿದ್ದಾರೆ.
ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೆಳಗಾವಿಯ ನಮ್ಮ ನೆಲ. ನಮ್ಮ ನೆಲಕ್ಕೆ ಬಂದು ಹಲ್ಲೆ ನಡೆಸಿ ಉದ್ಧಟತನ ಮೆರೆದಿರುವ ಎಂಇಎಸ್ ಪುಂಡರಿಗೆ ಕನ್ನಡಿಗರು ತಕ್ಕ ಪಾಠ ಕಲಿಸಬೇಕಿದೆ. ಈ ನಿಟ್ಟಿನಲ್ಲಿ ಮಂಗಳವಾರ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.