
ಬೆಳಗಾವಿ: ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಎಂಇಎಸ್ ಪುಂಡರು ಹಲ್ಲೆ ನಡೆಸಿರುವುದನ್ನು ಖಂಡಿಸಿ ಬೆಳಗಾವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ತೀವ್ರಗೊಳಿಸಿದ್ದಾರೆ. ಒಂದೆಡೆ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಕರವೇ ನಾರಾಯಣಗೌಡ ಬಣದಿಂದ ಪ್ರತಿಭಟನೆ ನಡೆಯುತ್ತಿದೆ.
ಎಂಇಎಸ್ ಪುಂಡರಿಂದ ಹಲ್ಲೆಗೊಳಗಾಗಿರುವ ಕಂಡಕ್ಟರ್ ಮಹದೇವ್ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಕರವೇ ಅಧ್ಯಕ್ಷ ನಾರಾಯಣಗೌಡ ಮಹದೇವ್ ಅವರ ಆರೋಗ್ಯ ವಿಚಾರಿಸಿದರು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ, ಬೆಳಗಾವಿಗೆ ಬಂದು ಬಸ್ ಕಂಡಕ್ಟರ್ ಮೇಲೆಯೇ ಎಂಇಎಸ್ ಪುಂಡರು ಹಲ್ಲೆ ನಡೆಸಿದ್ದಾರೆ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಓರ್ವ ಚಾಲಕ, ಕಂಡಕ್ಟರ್ ನನ್ನು ಬಸ್ ನಿಂದ ಕೆಳಗಿಳಿಸಿ ಮಹರಾಷ್ಟ್ರ ಪರ ಘೋಷಣೆ ಕೂಗುವಂತೆ ಹೇಳುತ್ತಿದ್ದಾರೆ. ಮರಾಠಿಗರ, ಎಂಇಎಸ್ ಪುಂಡಾಟಕ್ಕೆ ಬ್ರೇಕ್ ಹಾಕುವ ಕಾಲ ಬಂದಿದೆ. ಬೆಳಗಾವಿಯಲ್ಲಿರುವ ಪ್ರತಿ ಮರಾಠಿಗರ ಬಾಯಲ್ಲಿ ಕರ್ನಾಟಕಕ್ಕೆ ಜೈ ಎನ್ನಿಸುವ ಕಾಲ ಬರಲಿದೆ ಎಂದು ಗುಡುಗಿದರು.
ಬೆಳಗಾವಿಯಲ್ಲಿ ಎಂಇಎಸ್ ಅಂತ್ಯವಾಗುತ್ತಿದೆ. ಆ ಹೊಟ್ಟೆ ಉರಿಗೆ ಇಂಥಹ ಹಲ್ಲೆ ನಡೆಸುತ್ತಿದ್ದಾರೆ. ಬೆಳಗಾವಿಯಲ್ಲಿ ಮಾತ್ರವಲ್ಲ ಇಡೀ ಕರ್ನಾಟಕದಲ್ಲಿ ಎಂಇಎಸ್ ಇಲ್ಲದಂತೆ ಮಾಡುವವರೆಗೂ ನಮ್ಮ ಹೋರಾಟ ನಿಲ್ಲಿಸಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.