ಬೆಳಗಾವಿ: ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ತೇವಗೊಂಡಿದ್ದ ಮನೆ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಒಂದೇ ಕುಟುಂಬದ 8 ಜನ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಅಗಸಗಿಯ ಕಲ್ಮೇಶ್ವರ ಗಲ್ಲಿಯಲ್ಲಿರುವ ಬಾಳು ಕಡೋಲಕರ ಮತ್ತು ಬಸವಣ್ಣ ಸೋದರರು ಕುಟುಂಬದವರೊಂದಿಗೆ ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಭಾರೀ ಮಳೆ ಸುರಿದ ಕಾರಣ ಮನೆಯೊಳಗೆ ನೀರು ನುಗ್ಗಿದ್ದು ನೀರನ್ನು ಹಾಕಿ ಎರಡು ದಿನಗಳಿಂದ ಅದೇ ಮನೆಯಲ್ಲಿ ವಾಸವಾಗಿದ್ದರು.
ತಡರಾತ್ರಿ ಮನೆಯವರು ನಿದ್ದೆಗೆ ಜಾರಿದ್ದ ಸಂದರ್ಭದಲ್ಲಿ ಛಾವಣಿಯಿಂದ ಶಬ್ಧ ಬಂದಿದೆ. ತಕ್ಷಣವೇ ಎಚ್ಚರಗೊಂಡ ಬಾಳು ಅವರು ಮಕ್ಕಳನ್ನು ಹೊರಗೆ ಕಳುಹಿಸಿದ್ದು, ಸೋದರನ ಕುಟುಂಬದವರನ್ನು ಕೂಡ ಹೊರಗೆ ಕರೆತಂದಿದ್ದಾರೆ. ಮನೆಯವರೆಲ್ಲ ಹೊರಗೆ ಬಂದ ಕೂಡಲೇ ತೇವಗೊಂಡಿದ್ದ ಮನೆ ಕುಸಿದುಬಿದ್ದಿದೆ. ಕೂದಲೆಳೆ ಅಂತರದಲ್ಲಿ 8 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ವಾರ ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಕುಸಿದು 7 ಮಂದಿ ಮೃತಪಟ್ಟಿದ್ದರು.