
ಬೆಳಗಾವಿ: ಬೆಳಗಾವಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ತಂದೆಯನ್ನು ಮಗನೊಬ್ಬ ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದು, ಯಾರೂ ದಿಕ್ಕಿಲ್ಲದೇ ಚಿಕಿತ್ಸೆ ಫಲಿಸದೇ ಹಿರಿಜೀವ ಸಾವನ್ನಪ್ಪಿರುವ ಘಟನೆ ಬಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಸತೀಶ್ವರ್ ಮೃತ ದುರ್ದೈವಿ. ಸತೀಶ್ವರ್ ಅವರ ಮಗ ಕಳೆದ 15 ದಿನಗಳ ಹಿಂದೆ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದ. ಬಳಿಕ ಕಳೆದ ಹತ್ತು ದಿನಗಳ ಹಿಂದೆಯೇ ಅನಾರೋಗ್ಯಪೀಡಿತ ತಂದೆಯನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ವಯಸ್ಸಾದ ಕಾಲಕ್ಕೆ ಮಗ ಆಸರೆಯಾಗುತ್ತಾನೆ ಎಂದು ಭಾಸಿದ್ದ ತಂದೆ, ಕಳೆದ ಹತ್ತು ದಿನಗಳಿಂದ ಯಾರೂ ದಿಕ್ಕಿಲ್ಲದೇ, ಮಗನ ಸುಳಿವೂ ಇಲ್ಲದೇ ಆಸ್ಪತ್ರೆಯಲ್ಲಿ ಕೊರಗಿದ್ದಾರೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸತೀಶ್ವರ್ ಮಾ.31ರಂದು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ನಿನ್ನೆಯಿಂದಲೂ ಆಸ್ಪತ್ರೆಯ ಶವಾಗಾರದಲ್ಲಿ ಅನಾಥ ಶವವಾಗಿದ್ದು, ಈ ಬಗ್ಗೆ ಮಾಹಿತಿ ತಿಳಿದ ಬೆಳಗಾವಿ ಪೊಲೀಸರು ಮಗನ ಹುಡುಕಾಟ ನಡೆಸಿದ್ದಾರೆ. ಆದರೆ ಪತ್ತೆಯಾಗಿಲ್ಲ. ಬಳಿಕ ಮೃತ ಸತೀಶ್ವರ್ ಅವರ ಮಗಳು ಗೋವಾದಲ್ಲಿ ವಾಸವಾಗಿರುವ ಬಗ್ಗೆ ಪತ್ತೆ ಮಾಡಿದ್ದಾರೆ. ಇಂದು ಗೋವಾದಿಂದ ಮಗಳನ್ನು ಕರೆತಂದು ಮೃತರ ಅಂತ್ಯಸಂಸ್ಕಾರ ಮಾಡಿಸಿದ್ದಾರೆ.
ಬೆಳಗಾವಿಯ ಸದಾಶಿವನಗರದಲ್ಲಿ ಮೃತ ಸತೀಶ್ವರ್ ಅವರ ಅಂತ್ಯಸಂಸ್ಕಾರ ನೆರವೇರಿದೆ. ಮಗಳು ಹೇಳುವ ಪ್ರಕಾರ, ತನ್ನ ಸಹೋದರ ಕೆಲ ದಿನಗಳ ಹಿಂದೆ ಜಗಳವಾಡಿ ಗೋವಾದಿಂದ ತಂದೆಯನ್ನು ಕರೆದುಕೊಂಡು ಬಂದಿದ್ದ. ತಾನೇ ನೋಡಿಕೊಳ್ಳುತ್ತೇನೆ ಎಂದಿದ್ದ. ಆದರೆ ಆಸ್ಪತ್ರೆಯಲ್ಲಿ ಬಿಟ್ಟು ಹೋದ ಬಗ್ಗೆ ತನಗೆ ಗೊತ್ತಿರಲಿಲ್ಲ ಎಂದಿದ್ದಾಳೆ.