ಬೆಳಗಾವಿ: ಪಶ್ಚಿಮ ಘಟ್ಟ, ಮಹರಾಷ್ಟ್ರ ಹಾಗೂ ಬೆಳಗಾವಿಯಲ್ಲಿ ನಿರಂತರ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬೆಳಗಾವಿಯಲ್ಲಿ 7 ನದಿಗಳ ಅಬ್ಬರಕ್ಕೆ 22 ಸೇತುವೆಗಳು ಜಲಾವೃತಗೊಂಡಿವೆ.
ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಇನ್ನೊಂದೆಡೆ ಪ್ರವಾಹ ಭೀತಿ ಎದುರಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 7 ನದಿಗಳು ತುಂಬಿ ಹರಿಯುತ್ತಿವೆ. ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂದಗಂಗಾ, ಕೃಷ್ಣಾ, ಪಂಚಗಂಗಾ, ಹಿರಣ್ಯಕೇಶಿ, ಮಾರ್ಕಾಂಡೇಯ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.
ರಸ್ತೆಗಳು, ಸೇತುವೆಗಳು ಸಂಪೂರ್ಣ ಜಲಾವೃತಾಗೊಂಡಿದ್ದು 44 ಗ್ರಾಮಗಳ ಸಂಪರ್ಕ ಸಂಪೂರ್ಣ ಕಡಿತಗೊಂಡಿವೆ. ಚಿಕ್ಕೋಡಿ, ನಿಪ್ಪಾಣಿ, ಮೂದಲಗಿ, ಗೋಕಾಕ್, ಹುಕ್ಕೇರಿ ತಾಲೂಕುಗಳಲ್ಲಿನ ಸೇತುವೆಗಳು ಮುಳುಗಡೆಯಾಗಿವೆ.
160ಕ್ಕೂ ಹೆಚ್ಚು ಮನೆಗಳು ಕುಸಿತಗೊಂಡಿದ್ದು, ಸಾವಿರಾರು ಎಕರೆ ಕಬ್ಬಿನ ಬೆಳೆ ಜಲಾವೃತಗೊಂಡಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ.