ಬೆಳಗಾವಿ: ಪಶ್ಚಿಮ ಘಟ್ಟ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ಇದರ ಜೊತೆಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಏಳು ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಶುರುವಾಗಿದೆ.
ದೂದಗಂಗಾ, ವೇದಗಂಗಾ, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ ಸೇರಿದಂತೆ ಬಹುತೇಕ ಎಲ್ಲಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಪರಿಣಾಮ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ. ಗ್ರಾಮಗಳು ಮುಳುಗಡೆಯಾಗಿವೆ.
ದತ್ತವಾಡ-ಮಲ್ಲಿಕವಾಡ, ಬೋಜ್-ಕಾರದಗಾ, ಬೋಜವಾಡಿ-ಕಣ್ಣೂರು, ಜತ್ರಾಟ-ಭಿವಶಿ, ಅಕ್ಕೋಳ-ಸಿದ್ನಾಳ, ಮಾಂಜರಿ-ಬಾವನಸೌದತ್ತಿ, ಯರನಳ-ಮದಮಕ್ಕನಾಳ, ಸುಣಧೋಳಿ-ಮೂಡಲಗಿ, ಅವರಾದಿ-ನಂದಗಾಂವ, ಕಮಲದಿನ್ನಿ-ಹುಣಶ್ಯಳ, ಗೋಕಾಕ್-ಶಿಂಗಳಾಪುರ, ಖಾನಾಪುರ-ಹೆಮ್ಮಡಗಾ, ವಡ್ಡರಗಟ್ಟಿ-ಉದಗಟ್ಟಿ ನಡುವಿನ ಸಂಪರ್ಕ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ.
ಗ್ರಾಮಗಳಲ್ಲಿ ನದಿಗಳು ಪ್ರವಾಹದಂತೆ ಅಬ್ಬರಿಸಿ ಹರಿಯುತ್ತಿರುವ ಪರಿಣಾಮ ಸೇತುವೆಗಳು ಮುಳುಗಡೆಯಾಗಿದ್ದು, ಬರೋಬ್ಬರಿ 34 ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿವೆ. ಬೆಳಗಾವಿಯ ಮೂಡಲಗಿ ತಾಲೂಕಿನ ನಾಲ್ಕು ಸೇತುವೆಗಳು ಘಟಪ್ರಭಾ ಅಬ್ಬರಕ್ಕೆ ಮುಳುಗಡೆಯಾಗಿವೆ. ಮಳೆಯಿಂದಾಗಿ ಹಲವೆಡೆ ಮನೆಗಳು ಕುಸಿದು ಬಿದ್ದಿದ್ದು, ನಿಪ್ಪಾಣಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇಷ್ಟಾದರೂ ನೂತನ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತ್ರ ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ತೊಂದರೆಯೂ ಆಗಿಲ್ಲ ಎಂದಿದ್ದಾರೆ. ಜಿಲ್ಲಾಧಿಕಾರಿ ಹೇಳಿಕೆಗೆ ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.