ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ 7 ನದಿಗಳಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 40 ಗ್ರಾಮಗಳಲ್ಲಿ ನದಿಗಳ ಪ್ರವಾಹದಿಂದಾಗಿ ಜನರು ಅತಂತ್ರಕ್ಕೆ ಸಿಲುಕಿದ್ದಾರೆ. 1,000ಕ್ಕೂ ಹೆಚ್ಚು ಕುಟುಂಬಗಳು ಪ್ರವಾಹಕ್ಕೆ ಸಿಲುಕಿ ಬೀದಿಗೆ ಬಿದ್ದಿವೆ.
ಮೂರೂವರೆ ಸಾವಿರ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ಆರೈಕೆ ಮಾಡಲಾಗುತ್ತಿದೆ. ಸಂಬಂಧಿಕರ ಮನೆ, ಜಮೀನಿನಲ್ಲಿ 1,800 ಸಂತ್ರಸ್ತರು ಸುರಕ್ಷಿತವಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈಗಾಗಲೇ 20 ಕಾಳಜಿ ಕೇಂದ್ರ ತೆರೆಯಲಾಗಿದೆ. ಗೋಕಾಕ್, ನಿಪ್ಪಾಣಿ, ಅಥಣಿ, ಮೂಡಲಗಿ, ಹುಕ್ಕೇರಿ, ಕಾಗವಾಡ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹದ ಪರಿಣಾಮ ಉಂಟಾಗಿದೆ.
ಇದುವರೆಗೆ 41 ಸಂಪರ್ಕ ಸೇತುವೆಗಳು ಜಲಾವೃತಗೊಂಡಿದ್ದು, ಸಂಚಾರವನ್ನು ಪೊಲೀಸರು ಬಂದ್ ಮಾಡಿದ್ದಾರೆ. ಸೇತುವೆಗಳ ಮುಳುಗಡೆಯಿಂದ 80ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಗೋಕಾಕ್ ನಗರದಲ್ಲೇ ಸುಮಾರು 300ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ಗೋಕಾಕ್ ಗೆ ಕೇವಲ ಒಂದು ಸಂಪರ್ಕ ಬಿಟ್ಟರೆ ಇನ್ನುಳಿದ ರಸ್ತೆಗಳು ಬಂದ್ ಆಗಿವೆ. ಘಟಪ್ರಭಾ ನದಿಯ ಅಬ್ಬರಕ್ಕೆ ಗೋಕಾಕ್ ಜನ ಬೆಚ್ಚಿಬಿದ್ದಿದ್ದಾರೆ.