ಬೆಳಗಾವಿ: ಪಶ್ಚಿಮ ಘಟ್ಟ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹವುಂಟಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಘಟಪ್ರಭಾ ನದಿ ಅಬ್ಬರಕ್ಕೆ ಗೋಕಾಕ್ ತಾಲೂಕಿನಲ್ಲಿ ಪ್ರವಾಹವುಂಟಾಗಿದ್ದು, 300ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ. ಮಳೆ ನೀರು ಮನೆಗೆ ನುಗ್ಗಿ ಅವಾಂತರ ಸೃಷ್ಟಿಯಾಗಿರುವ ಸುದ್ದಿ ಕೇಳಿ ಮನೆ ಯಜಮಾನ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗೋಕಾಕ್ ಉಪ್ಪಾರಗಲ್ಲಿಯಲ್ಲಿ ನಡೆದಿದೆ.
ದಶರಥ ಬಂಡಿ ಮೃತ ದುರ್ದೈವಿ. ಉಪ್ಪಾರಗಲ್ಲಿಯ ಮನೆಗೆ ತಡರಾತ್ರಿ ಏಕಾಏಕಿ ನೀರು ನುಗ್ಗಿದೆ. ಮನೆಯಲ್ಲಿದ್ದವರು ಉಟ್ಟಬಟ್ಟೆಯಲ್ಲಿ ಜೀವ ರಕ್ಷಿಸಿಕೊಳ್ಳಲು ಹೊರಬಂದಿದ್ದಾರೆ. ಸುದ್ದಿ ಕೇಳಿ ಶಾಕ್ ಆದ ದಶರಥ ಬಂಡಿ ಎಂಬುವವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮನೆಯ ಹಿರಿಯ ವ್ಯಕ್ತಿ ದಶರಥ ಬಂಡಿಯ ಅಂತ್ಯಸಂಸ್ಕಾರ ಮುಗಿಸಿ ಇಂದು ವಾಪಸ್ ಉಪ್ಪಾರಗಲ್ಲಿಯಲ್ಲಿನ ಮನೆ ಬಳಿ ಬಂದು ನೋಡಿದರೆ ಮನೆಯೇ ಸಂಪೂರ್ಣ ಮುಳುಗಡೆಯಾಗಿದೆ. ಕಂಗಾಗಾಲಿಗಿರುವ ಕುಟುಂಬ ದಿಕ್ಕು ತೋಚದೆ ಕಣ್ಣೀರಿಟ್ಟಿದೆ. ಸದ್ಯ ಮನೆಯ ಸದಸ್ಯರನ್ನು, ಮಕ್ಕಳನ್ನು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.