ಬೆಳಗಾವಿ: ಫೈನಾನ್ಸ್ ಕಂಪನಿಯ ಸಿಬ್ಬಂದಿಗಳು ಬಾಣಂತಿ, ಹಸುಗೂಸನ್ನೂ ಲೆಕ್ಕಿಸದೇ ಕುಟುಂಬವನ್ನು ಮನೆಯಿಂದ ಹೊರ ಹಾಕಿ, ಮನೆ ಜಪ್ತಿ ಮಾಡಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ತಕ್ಷಣ ಮಾನವೀಯತೆ ಮೆರೆದಿದ್ದು, ಫೈನಾನ್ಸ್ ಕಂಪನಿ ಜೊತೆ ಮಾತುಕತೆ ನಡೆಸಿ ಮನವೊಲಿಸಿದ್ದಾರೆ.
ಬೆಳಗಾವಿಯ ತಾರಿಹಾಳ ಗ್ರಾಮದಲ್ಲಿ ಫೈನಾನ್ಸ್ ಕಂಪನಿಯವರು ಬಾಣಂತಿಯನ್ನು ಒಂದು ತಿಂಗಳ ಕಂದಮ್ಮನ ಜೊತೆಗೆ ಅವರ ತಂದೆ-ತಾಯಿಯನ್ನು ಮನೆಯಿಂದ ಹೊರ ಹಾಕಿ,ಪಾತ್ರೆ, ಬಟ್ಟೆಗಳನ್ನು ಹೊರಗಿಟ್ಟು ಮನೆಯನ್ನು ಸೀಜ್ ಮಾಡಿ ಹೋಗಿದ್ದರು. ನವಜಾತ ಮಗುವನ್ನು ಎತ್ತಿಕೊಂಡು ಬಾಣಂತಿ ಹಾಗೂ ತಂದೆ-ತಾಯಿ ಮನೆಯ ಮುಂದೆಯೇ ಕಣ್ಣೀರುಡುತ್ತಿದ್ದರು. ಫೈನಾನ್ಸ್ ನವರ ಕಿರುಕುಳಕ್ಕೆ ದಿಕ್ಕೆಟ್ಟು ಹೋಗಿದ್ದರು.
ಸುದ್ದಿ ತಿಳಿಯುತ್ತಿದ್ದಂತೆಯೇ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಆಪ್ತಸಹಾಯಕನನ್ನು ಬಾಣಂತಿ ಹಾಗೂ ಕುಟುಂಬದವರ ಮನೆ ಬಳಿ ಕಳುಹಿಸಿ ಬಳಿಕ ಫೈನಾನ್ಸ್ ಕಂಪನಿಯವರ ಜೊತೆ ಮಾತುಕತೆ ನಡೆಸುವಂತೆ ಸೂಚಿಸಿದ್ದಾರೆ. ಅಲ್ಲದೇ ಫೈನಾನ್ಸ್ ಕಂಪನಿ ಜೊತೆಗೆ ಸಂಧಾನ ಯಶಸ್ವಿಯಾಗಿದ್ದು, ಸದ್ಯ ಬಾಣಂತಿ, ಕಂದಮ್ಮ, ತಂದೆ-ತಾಯಿ ಮನೆಗೆ ಹಿಂತಿರುಗಿದ್ದಾರೆ. ಸೀಜ್ ಆಗಿದ್ದ ಮನೆ ಬಾಗಿಲು ತೆರೆದು ಮನೆಯೊಳಗೆ ಪ್ರವೇಶಿಸಿದ್ದು, ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಆರ್ಥಿಕ ನೆರವು, ದಿನಸಿ ಸಾಮಗ್ರಿಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.