ಬೆಳಗಾವಿ: ವರದಕ್ಷಿಣೆ ಪಿಡುಗು ತಡೆಯುವ ನಿಟ್ಟಿನಲ್ಲಿ ಅದೆಷ್ಟೇ ಕಾನೂನುಗಳು ಬಂದಿದ್ದರೂ, ಪ್ರಪಂಚ ಆಧುನಿಕವಾಗಿ ಎಷ್ಟೇ ಮುಂದುವರೆದಿದ್ದರೂ ಜನ ಮಾತ್ರ ತಮ್ಮ ಮನಃಸ್ಥಿತಿಯನ್ನು ಬದಲಿಸಿಕೊಂಡಿಲ್ಲ. ವರದಕ್ಷಿಣೆ ಪಡೆಯುವುದು ತಪ್ಪು ಎಂದು ಗೊತ್ತಿದ್ದರೂ ಇಲ್ಲೋರ್ವ ವರ ಮಹಾಶಯ ಮದುವೆ ದಿನವೇ ವರದಕ್ಷಿಣೆಗೆ ಪಟ್ಟು ಹಿಡಿದು ಜೈಲುಪಾಲಾಗಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಮದುವೆ ದಿನ ತಾಳಿಕಟ್ಟುವ ವೇಳೆ ವರ ವರದಕ್ಷಿಣೆ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾನೆ. ಕೊನೆ ಕ್ಷಣದಲ್ಲಿ ಮದುವೆ ಮುರಿದು ಬಿದ್ದಿದ್ದು ವರ ಜೈಲು ಸೇರಿದ್ದಾನೆ.
ಮದುವೆ ನಿಶ್ಚಿತಾರ್ಥದ ವೇಳೆ 50 ಗ್ರಾಂ ಚಿನ್ನ, 1 ಲಕ್ಷ ವರೋಪಚಾರ ನೀಡುವ ಮಾತುಕತೆಯಾಗಿತ್ತು. ಆದರೆ ಹಳೇಹುಬ್ಬಳ್ಳಿಯ ನಿವಾಸಿ ವರ ಸಚಿನ್ ಪಾಟೀಲ್ ಕುಟುಂಬದವರು 100 ಗ್ರಾಂ ಚಿನ್ನ, 10 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ವಧುವಿನ ಕಡೆಯವರು ಒಪ್ಪಿಲ್ಲ. ಅಲ್ಲದೇ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ವಧುವಿನ ಕಡೆಯವರು ದೂರು ನೀಡಿದ್ದರು.
ಈ ವೇಳೆ ವರ ಮದುವೆಗೆ ಒಪ್ಪಿದ್ದಾನೆ. ಮದುವೆಯ ದಿನ ತಾಳಿಕಟ್ಟುವ ವೇಳೆ ವರ ಮತ್ತೆ ಕ್ಯಾತೆ ತೆಗೆದಿದ್ದಾನೆ. ವಧುವಿನ ಕಡೆಯವರು ವರದಕ್ಷಿಣೆ ನೀಡಲು ಸಾಧ್ಯವಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಖಾನಾಪುರ ಠಾಣೆ ಪೊಲೀಸರು ಕಲ್ಯಾಣ ಮಂಟಪಕ್ಕೆ ಬಂದು ವರನನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.