ಬೆಂಗಳೂರು: ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಕಾಂಗ್ರೆಸ್ ಅಧಿವೇಶನಕ್ಕೆ ಕೇಂದ್ರ ಸಚಿವ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
1924ರ ಡಿ.26ರಂದು ಮಹಾತ್ಮಾ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ಮೊದಲ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಈ ಅಧಿವೇಶನಕ್ಕೆ ಇಂದು 100 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಬೆಳಗಾವಿಯಲ್ಲಿ ಎರಡು ದಿನಗಳ ಕಾಲ ಗಾಂಧಿ ಭಾರತ ಎಂಬ ಹೆಸರಿನಲ್ಲಿ ಕಾಂಗ್ರೆಸ್ ಅಧಿವೇಶನ ಕಾರ್ಯಕ್ರಮ ಹಮ್ಮಿಕೊಂಡಿದೆ. ಬೆಳಗಾವಿ ನಗರದಾದ್ಯಂತ ಮೈಸೂರು ದಸರಾ ಮಾದರಿಯಲ್ಲಿ ದೀಪಾಲಂಕಾರ ಮಾಡಲಾಗಿದೆ. ಎಲ್ಲೆಲ್ಲೂ ಮುಗಿಲೆತ್ತರದ ಕಾಂಗ್ರೆಸ್ ನಾಯಕರ ಕಟೌಟ್, ಬ್ಯಾನರ್ ಗಳು ರಾರಾಜಿಸುತ್ತಿವೆ. ಕಾಂಗ್ರೆಸ್ ಅಧಿವೇಶನಕ್ಕೆ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಮಾಡುತ್ತಿದ್ದಾರೆ. ಅಧಿವೇಶನದಲ್ಲಿ ಬರೀ ಆಧುನಿಕ ಗಾಂಧಿಗಳ ಕಟೌಟ್ ಗಳೇ ರಾರಾಜಿಸುತ್ತಿವೆ. ಎಲ್ಲಿಯೂ ಗಾಂಧೀಜಿಯವರ ಕಟೌಟ್ ಇಲ್ಲ. ಎಲ್ಲಾ ಆಧುನಿಕ ಗಾಂಧಿಗಳ ಕಟೌಟ್ ಮುಗಿಲೆತ್ತರದವರೆಗೆ ಕಟ್ಟಿದ್ದಾರೆ. ಇವರು ಗಾಂಧೀಜಿ ಸ್ಮರಣೆ ಮಾಡುತ್ತಾರಾ? ಎಂದು ಕಿಡಿಕಾರಿದ್ದಾರೆ.
ಗಾಂಧೀಜಿಯವರ ಹೆಸರಿನಲ್ಲಿ ಒಂದು ವರ್ಷದವರೆಗೆ ಕಾರ್ಯಕ್ರಮಗಳನ್ನು ಮಾಡುತ್ತೇವೆ ಎಂದಿದ್ದಾರೆ. ಗಾಂಧೀಜಿ ಹೆಸರಿನಲ್ಲಿ ಶತಮಾನೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಮಾಡುತ್ತಿದ್ದಾರೆ. ಆದರೆ ಗಾಂಧೀಜಿಯವರ ಕಟೌಟ್ ಇಲ್ಲ. ರಾಜ್ಯದಲ್ಲಿ ಮೃಗೀಯ ರೀತಯಲ್ಲಿ ಕಾಂಗ್ರೆಸ್ ನವರು ರಾಜ್ಯಭಾರ ಮಾಡುತ್ತಿದ್ದಾರೆ. ಇವರು ಗಾಂಧಿ ಸ್ಮರಣೆ ಮಾಡುವವರಾ? ಎಂದು ಪ್ರಶ್ನಿಸಿದ್ದಾರೆ.