ಬೆಳಗಾವಿ: ಒಂದೆಡೆ ಲೋಕಸಭಾ ಚುನಾವಣಾ ಅಖಾಡ ಕಾವೇರುತ್ತಿದೆ. ಇನ್ನೊಂದೆಡೆ ರಣಬಿಸಿಲ ಝಳಕ್ಕೆ ಜನರು ಮಾತ್ರವಲ್ಲ ಚುನಾವಣಾ ಸಿಬ್ಬಂದಿ, ಪೊಲೀಸ್ ಸಿಬ್ಬಂದಿಗಳು ತತ್ತರಿಸಿ ಹೋಗುತ್ತಿದ್ದಾರೆ. ರಾಜ್ಯದಲ್ಲಿ ಒಂದೇ ಸಮನೇ ಹೆಚ್ಚುತ್ತಿರುವ ತಾಪಮಾನ, ಬಿಸಿಗಾಳಿಗೆ ಚೆಕ್ ಪೋಸ್ಟ್ ಗಳಲ್ಲಿ ಸಿಬ್ಬಂದಿಗಳು ಸುಸ್ತಾಗಿ ಹೋಗಿದ್ದಾರೆ. ಸಿಬ್ಬಂದಿಗಳ ಮೇಲಿನ ಕಾಳಜಿಗೆ ಬೆಳಗಾವಿ ಜಿಲ್ಲಾಡಳಿತ ಏರ್ ಕೂಲರ್ ವ್ಯವಸ್ಥೆ ಮಾಡಿದೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಧ್ಯಾಹ್ನವಾಗುತ್ತಿದ್ದಂತೆ ಉಷ್ಣಗಾಳಿ, ರಣಬಿಸಿಲ ಬೇಗೆಯಿಂದ ಚೆಕ್ ಪೋಸ್ಟ್ ಗಳಲ್ಲಿ ಚುನಾವಣಾ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು ಸಂಕಷ್ಟಕ್ಕೆ ಸುಲುಕುತ್ತಿದ್ದಾರೆ. ಚೆಕ್ ಪೋಸ್ಟ್ ಸಿಬ್ಬಂದಿಗಳ ಅನುಕೂಲಕ್ಕಾಗಿ 66 ಚೆಕ್ ಪೋಸ್ಟ್ ಗಳಲ್ಲಿ ಜಿಲ್ಲಾಡಳಿತ ಏರ್ ಕೂಲರ್, ನೀರಿನ ಕ್ಯಾನ್ ವ್ಯವಸ್ಥೆ ಮಾಡಿದೆ.
ಬೆಳಗಾವಿಯ ವಿವಿಧ ಚೆಕ್ ಪೋಸ್ ಗಳಿಗೆ ಡಿಸಿ ನಿತೇಶ್ ಪಾಟೀಲ್ ಹಾಗೂ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಚುನಾವಣಾ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆಯೂ ಪರಿಶೀಲಿಸಿ, ಮಾಹಿತಿ ಸಂಗ್ರಹಿಸಿದ್ದಾರೆ.