ಬೆಳಗಾವಿ: ರಾಜ್ಯದಲ್ಲಿ ಮತ್ತೊಂದು ಬೋರ್ವೆಲ್ ದುರಂತ ಸಂಭವಿಸಿದೆ. ಬೋರ್ವೆಲ್ಲಿಗೆ ಬಿದ್ದಿದ್ದ ಮಗು ಮೃತದೇಹ ಪತ್ತೆಯಾಗಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಆಲಖನೂರ ಗ್ರಾಮದ ಬಳಿ ಬೋರ್ ವೆಲ್ ನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಬೋರ್ವೆಲ್ ಗೆ ಬಿದ್ದಿದ್ದ ಮಗು ಮೃತಪಟ್ಟಿರುವುದಾಗಿ ಬೆಳಗಾವಿ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ. ನಿನ್ನೆ ಸಂಜೆಯಿಂದಲೇ ನಾಪತ್ತೆಯಾಗಿದ್ದ ಶರತ್ ಎಂಬ ಎರಡೂವರೆ ವರ್ಷದ ಮಗು ಬೋರ್ವೆಲ್ ನಲ್ಲಿಯೇ ಮೃತಪಟ್ಟಿದೆ.
ಶರತ್ ಹಸಿರೆ ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದು, ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಬಾಲಕನ ಅಪಹರಣ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು ತೋಟದ ಮನೆಯಲ್ಲಿ ವಾಸವಾಗಿದ್ದ ಕುಟುಂಬದವರು ಮನೆಯಿಂದ 200 ಮೀಟರ್ ದೂರದಲ್ಲಿ ಬೋರ್ವೆಲ್ ಕೊರೆಸಿದ್ದರು. ನಿನ್ನೆ ಸಂಜೆ ಆಟವಾಡುತ್ತಿದ್ದ ಮಗು ಬೋರ್ವೆಲ್ ಗೆ ಬಿದ್ದಿದೆ. ಇವತ್ತು ಸಂಜೆ ಮಗು ಬೋರ್ವೆಲ್ ಗೆ ಬಿದ್ದಿರುವ ಮಾಹಿತಿ ಗೊತ್ತಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮಗುವಿನ ಕೂಗಾಟದ ಸದ್ದು ಕೇಳಿಬಂದಿರಲಿಲ್ಲ. ಪರಿಶೀಲನೆ ನಡೆಸಿದಾಗ ಮಗು ಮೃತಪಟ್ಟಿರುವ ಮಾಹಿತಿ ಗೊತ್ತಾಗಿದೆ ಎಂದು ಹೇಳಲಾಗಿದೆ.
ಆರು ತಿಂಗಳ ಹಿಂದೆಯಷ್ಟೇ ಜಮೀನಿನಲ್ಲಿ ಬೋರ್ವೆಲ್ ಕೊರೆಸಲಾಗಿದ್ದು, ಆದರೆ ನೀರು ಸಿಗದ ಕಾರಣ ಬೋರ್ವೆಲ್ ಮುಚ್ಚದೆ ಹಾಗೆ ಬಿಡಲಾಗಿತ್ತು. ಬೋರ್ವೆಲ್ ಮುಚ್ಚದೆ ಹಾಗೆ ಬಿಟ್ಟಿದ್ದ ಹಿನ್ನೆಲೆಯಲ್ಲಿ ದುರ್ಘಟನೆ ಸಂಭವಿಸಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.