ಬೆಳಗಾವಿಯಲ್ಲಿ ಇಂದಿನಿಂದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಬಿಜೆಪಿ ಸಜ್ಜಾಗಿದೆ. ಇದಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಕೂಡ ತಯಾರಿ ನಡೆಸಿಕೊಂಡಿದೆ.
ಬಲವಂತದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿರುವ ಬಿಜೆಪಿ ಈ ನಿಟ್ಟಿನಲ್ಲಿ ಪೂರ್ವತಯಾರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಎಷ್ಟು ಮತಾಂತರ ನಡೆದಿದೆ ಮತ್ತು ಮತಾಂತರ ನಿಷೇಧ ಇರುವ ರಾಜ್ಯಗಳಲ್ಲಿನ ನಿಯಮಗಳ ಬಗ್ಗೆ ಅಧ್ಯಯನ ಮಾಡಲಾಗಿದೆ. ಬಿಜೆಪಿ ಸದಸ್ಯ ತುಳಸಿ ಮುನಿರಾಜು ಗೌಡ ಖಾಸಗಿ ಬಿಲ್ ಮಂಡಿಸಲು ತಯಾರಿ ಮಾಡಿಕೊಂಡಿದ್ದಾರೆ. ಸರ್ಕಾರ ಕೂಡ ಬಿಲ್ ಮಂಡನೆಗೆ ರೆಡಿಯಾಗಿದೆ.
ಪ್ರಸ್ತುತ ಬಲವಂತದ ಮತ್ತು ಆಮಿಷವೊಡ್ಡಿ ಮತಾಂತರ ಮಾಡುವುದು ನಿಷೇಧವಾಗಿದೆ. ಈಗಿರುವ ಕಾನೂನಿನಲ್ಲಿ ಬಲವಂತದ ಮತಾಂತರ ಶಿಕ್ಷಾರ್ಹ ಅಪರಾಧವೆಂದು ಹೇಳಲಾಗಿದೆ.
ಈಗ ಯಾವುದೇ ಸಮುದಾಯಗಳಿಗೆ ನೋವಾಗದಂತೆ, ಅಡಚಣೆಯಾಗದಂತೆ ಬಲವಂತದ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುವುದು. ಬಿಜೆಪಿ ಬಿಲ್ ಮಂಡಿಸಿದರೆ ಕಾಂಗ್ರೆಸ್ ನಿಂದ ಬಿಟ್ ಕಾಯಿನ್, 40 ಪರ್ಸೆಂಟ್ ಕಮಿಷನ್ ವಿಚಾರ ಮೊದಲಾದವುಗಳನ್ನು ಪ್ರಸ್ತಾಪಿಸಲು ಸಜ್ಜಾಗಿದೆ. ಒಟ್ಟಿನಲ್ಲಿ ಇಂದಿನಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಆಡಳಿತ, ವಿಪಕ್ಷಗಳ ನಡುವೆ ಮಾತಿನ ಮಲ್ಲಯುದ್ಧವೇ ನಡೆಯಲಿದೆ.