
ಬೆಳಗಾವಿ: ಬಳ್ಳಾರಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿಗೆ RLS ಐವಿ ಗ್ಲುಕೋಸ್ ಕಾರಣ ಎಂಬ ವರದಿ ಬೆನ್ನಲ್ಲೇ ಲೋಕಾಯುಕ್ತ ಅಧಿಕಾರಿಗಳು ಬೆಳಗಾವಿ ಜಿಲ್ಲಾ ಔಷಧಿ ಉಗ್ರಾಣದ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿರುವ ಜಿಲ್ಲಾ ಔಷಧಿ ಉಗ್ರಾಣದ ಮೇಲೆ ಬೆಳಗಾವಿ ಲೋಕಾಯುಕ್ತ ಎಸ್ ಪಿ ಹನುಮಂತರಾಯ ನೇತೃತ್ವದ 8 ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದೆ.
ಈ ವೇಳೆ RLS ಐವಿ ಗ್ಲುಕೋಸ್ ನ 10ಕ್ಕೂ ಹೆಚ್ಚು ಬಾಕ್ಸ್ ಗಳು ಪತ್ತೆಯಾಗಿವೆ. ಬಳ್ಳಾರಿಯಲ್ಲಿ RLS ಐವಿ ಗ್ಲುಕೋಸ್ ಬಾಣಂತಿಯರ ಸಾವಿಗೆ ಕಾರಣ ಎಂದು ತಿಳಿಯುತ್ತಿದ್ದಂತೆ ಈ ಗ್ಲುಕೋಸ್ ನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಆರೋಗ್ಯ ಇಲಾಖೆ ಕೂಡ ಎಲ್ಲಾ ಆಸ್ಪತ್ರೆಗಳಿಗೂ RLS ಐವಿ ಗ್ಲುಕೋಸ್ ಬಳಸದಂತೆ ಸೂಚಿಸಿದೆ. ಆದಾಗ್ಯೂ ಜಿಲ್ಲಾ ಔಷಧ ಉಗ್ರಾಣದಲ್ಲಿ ಇಷ್ಟೊಂದು ಪ್ರಮಾಣದಲ್ಲಿ RLS ಐವಿ ಗ್ಲುಕೋಸ್ ನ ಬಾಕ್ಸ್ ಗಳು ಪತ್ತೆಯಾಗಿರುವುದು ಅಚ್ಚರಿಗೆ ಕರಣವಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.