ಬೆಳಗಾವಿ: ರಾಜ್ಯದಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರೆದಿದೆ. ಅದರಲ್ಲಿಯೂ ಬೆಳಗಾವಿ ಜಿಲ್ಲಾಸ್ಪತ್ರೆ ಭಿಮ್ಸ್ ನಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ.
ಪೂಜಾ ಅಡಿವೆಪ್ಪ ಖಡಕಬಾವಿ (25) ಮೃತ ಬಾಣಂತಿ. ಬೆಳಗಾವಿಯ ಗೋಕಾಕ್ ತಾಲೂಕಿನ ಕುಂದರಗಿ ಗ್ರಾಮದವರು. ಡಿ.24ರಂದು ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಪೂಜಾ, ಡಿ.25ರ ಮಧ್ಯಾಹ್ನ ಗಂದು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಪಿಡ್ಸ್ ಬಂದು ಪೂಜಾ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಕುಟೂಂಬದವರಿಗೆ ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯನ್ನೂ ನಡೆಸದೇ ತರಾತುರಿಯಲ್ಲಿ ಬಾಣಂತಿ ಶವಕೊಟ್ಟು ವೈದ್ಯರು ಕಳುಹಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಬಾಣಂತಿ ಪೂಜಾ ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆ ವೈದ್ಯ ವಸಂತ್ ಕಬ್ಬೂರ, ಪೂಜಾ ಅವರಿಗೆ ಮೂರು ಮಕ್ಕಳಿದ್ದು, ಒಂದು ಆಪರೇಷನ್ ಆಗಿತ್ತು. ಬಿಮ್ಸ್ ಆಸ್ಪತ್ರೆಗೆ ಬಂದಾಗಲೇ ಪೂಜಾಗೆ ಪ್ರಜ್ಞೆ ಇರಲಿಲ್ಲ. ತಕ್ಷಣ ಅವರಿಗೆ ಐಸಿಯುಗೆ ಶಿಫ್ಟ್ ಮಾಡಿದ್ದೆವು. ತಪಾಸಣೆ ಬಳಿಕ ಅವರಿಗೆ ಹೃದಯ ವೀಕ್ ಇದೆ ಎಂದು ಹೇಳಿದ್ದೆವು. ಹೆರಿಗೆ ಬಳಿಕ ಹೃದಯ ದೊಡ್ಡದಾಗಿತ್ತು. ಪಂಪಿಂಗ್ ಆಗದೇ ಇಂದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಮಗು 1.6 ಕೆಜಿ ಇದೆ. ಮಗುವಿಗೂ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ನಮ್ಮ ನಿರ್ಲಕ್ಷ್ಯವಿಲ್ಲ ಎಂದು ವಿವರಿಸಿದ್ದಾರೆ.