ಬೆಳಗಾವಿ: ಎಟಿಎಂಗೆ ಹಣ ಹಾಕಿದ ಬ್ಯಾಂಕ್ ಸಿಬ್ಬಂದಿಯೊಬ್ಬ ಬಳಿಕ ಎಟಿಎಂನಲ್ಲಿದ್ದ ಹಣವನ್ನು ತಾನೇ ಕದ್ದು ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಈ ಬಗ್ಗೆ ಬೆಳಗಾವಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿ ಕೃಷ್ಣಾ ಸುರೇಶ್ ದೇಸಾಯಿ (23) ಎಂಬಾತನನ್ನು ಬಂಧಿಸಿದ್ದಾರೆ. ಜ್ಯೋತಿನಗರದ ನಿವಾಸಿಯಾಗಿರುವ ಈತ ಹೆಚ್.ಡಿ.ಎಫ್ ಸಿ ಬ್ಯಾಂಕ್ ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಎಟಿಎಂ ಕಸ್ಟೋಡಿಯಂ ಆಗಿದ್ದ ಕೃಷ್ಣಾ ಸುರೇಶ್, ಎಂದಿನಂತೆ ಬ್ಯಾಂಕ್ ನಿಂದ ಹಣ ತಂದು ಹೆಚ್ ಡಿಎಫ್ ಸಿ ಎಟಿಎಂ ಗೆ ಹಾಕುತ್ತಿದ್ದ. ನವೆಂಬರ್ 26ರಂದು ಬೆಳಗಾವಿ ಕೋರ್ಟ್ ಎದುರಿನ ಎಟಿಎಂಗೆ ಹಣ ಹಾಕಿ ಹೋಗಿದ್ದ ಕೃಷ್ಣಾ ಸುರೇಶ್, ಕೆಲ ಹೊತ್ತಿನ ಬಳಿಕ ವಾಪಾಸ್ ಬಂದು ಲಾಕ್ ಓಪನ್ ಮಾಡಿ 8.65 ಲಕ್ಷ ಹಣ ಎಗರಿಸಿ ಪರಾರಿಯಾಗಿದ್ದಾನೆ.
ಎಟಿಎಂ ಕಳ್ಳತನದ ಬಗ್ಗೆ ತನಿಖೆ ನಡೆಸಿದ ಪೋಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಬ್ಯಾಂಕ್ ಸಿಬ್ಬಂದಿ ಹಣ ಹಾಕಿದ ಬಳಿಕ ತಾನೇ ಮತ್ತೆ ಬಂದು ಹಣ ತೆಗೆದಿರುವುದು ಗೊತ್ತಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಕೃಷ್ಣ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಕದ್ದ ಹಣದಲ್ಲಿ 1.54 ರೂ ನಲ್ಲಿ ತಾಯಿಗೆ ಚಿನ್ನದ ಸರ ಕೊಡಿಸಿದ್ದನಂತೆ ಉಳಿದ ಸ್ವಲ್ಪ ಹಣ ಮೋಜು-ಮಸ್ತಿಗೆ ಬಳಸಿದ್ದನಂತೆ. ಸದ್ಯ ಆರೋಪಿಯಿಯಿಂದ ಚಿನ್ನದ ಸರ, 5.74 ಲಕ್ಷ ಹಣ ಜಪ್ತಿ ಮಾಡಲಾಗಿದೆ.