
ಬೆಳಗಾವಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ಗ್ಯಾಸ್ ಕಟರ್ ಬಳಸಿ ಎಟಿಎಂ ನಲ್ಲಿದ್ದ ಹಣವನ್ನು ಕಳ್ಳರ ಗ್ಯಾಂಗ್ ದೋಚಿರುವ ಘಟನೆ ಬೆಳಗಾವಿ ಜಿಲ್ಲೆಯ ಸಾಂಬ್ರಾದಲ್ಲಿ ನಡೆದಿದೆ.
ಸಂಬ್ರಾ ಗ್ರಾಮದ ಮುಖ್ಯರಸ್ತೆಯಲ್ಲಿರುವ ಎಸ್ ಬಿಐ ಬ್ಯಾಂಕ್ ಎಟಿಎಂ ಗೆ ನುಗ್ಗಿದ ಕಳ್ಳರ ಗ್ಯಾಂಗ್ ಕೇವಲ 7 ನಿಮಿಷಗಳಲ್ಲಿ ಗ್ಯಾಸ್ ಕಟರ್ ಬಳಸಿ ಎಟಿಎಂ ನಿಂದ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ.
ಎಟಿಎಂ ನಿಂದ 75,600 ರೂಪಾಯಿ ಹಣ ದೋಚಲಾಗಿದೆ. ಮುಖಕ್ಕೆ ಮಾಸ್ಕ್ ಧರಿಸಿ ಬಂದ ಮೂವರು ಕಳ್ಳರು, ಎಟಿಎಂ ನಲ್ಲಿದ್ದ ಸಿಸಿಟಿವಿಗೆ ಸ್ಪ್ರೇ ಹೊಡೆದು ಬಳಿಕ ಎಟಿಎಂ ನಲ್ಲಿದ್ದ ಹಣ ದೋಚಿದ್ದಾರೆ.
ಘಟನಾ ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳಗಾವಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್, ಆರೋಪಿಗಳ ಪತ್ತೆಗೆ ಮೂರು ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.