
ಬೆಳಗಾವಿ: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ ಹಾಗೂ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ ಬಳಿ ನಡೆದಿದೆ.
ಹಿಂಬದಿಯಿಂದ ಬಂದ ಕಾರು ಬೈಕ್ ಗೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಬೈಕ್ ನಲ್ಲಿದ್ದ ತಂದೆ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾಮು ಕರ್ಣಿ (49) ಹಾಗೂ ಮಗಳು ಜಾಹ್ನವಿ (11) ಮೃತರು. ರಾಮು ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಮಹಾರಾಷ್ಟ್ರದ ಜತ್ತ ತಾಲೂಕಿನ ಮಂಡಿಗೇರಿ ನಿವಾಸಿಗಳು. ಅನಂತಪುರಕ್ಕೆ ಸೋದರ ಸಂಬಂಧಿ ವಿವಾಹಕ್ಕೆ ಬಂದಿದ್ದರು. ಮದುವೆ ಮುಗಿಸಿ ವಾಪಾಸ್ ಹೋಗುವಾವಗ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾರು ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ