ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ 7 ನದಿಗಳ ಅಬ್ಬರಕ್ಕೆ ಭೀಕರ ಪ್ರವಾಹವುಂಟಾಗಿದ್ದು, ಗ್ರಾಮಕ್ಕೆ ಗಾಮಗಳೇ ಮುಳುಗಡೆಯಾಗಿವೆ. ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ.
ಜಿಲ್ಲೆಯ ಹಲವೆಡೆ ಸೇತುವೆಗಳು, ಜಮೀನು, ಮನೆಗಳು, ದೇವಸ್ಥಾನ, ಬ್ಯಾಂಕ್, ಕಚೇರಿಗಳು ಜಲಾವೃತಗೊಂಡಿದ್ದು, ಜನರು ಅತಂತ್ರ ಸ್ಥಿತಿ ತಲುಪಿದ್ದು, ಕಣ್ಣೀರಿಡುತ್ತಿದ್ದಾರೆ.
ಬೆಳಗಾವಿಯ ಗೋಕಾಕ್, ನಿಪ್ಪಾಣಿ, ಅಥಣಿ, ಚಿಕ್ಕೋಡಿ, ಮೂಡಲಗಿ, ಹುಕ್ಕೇರಿ, ಕಾಗವಾಡ ತಾಲೂಕುಗಳಲ್ಲಿ ಪ್ರವಾಹದ ಅಬ್ಬರಕ್ಕೆ ಜನರ ಬದುಕೇ ಅಯೋಮಯವಾಗಿದೆ. ಕಣ್ಣು ಹಾಸಿದಲ್ಲೆಲ್ಲ ನೀರು ತುಂಬಿಕೊಂಡಿದ್ದು, ಜನರು ಮನೆಗಳನ್ನು ತೊರೆದು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ 41 ಸೇತುವೆಗಳು ಮುಳುಗಡೆಯಾಗಿದ್ದು, 40ಕ್ಕೂ ಹೆಚ್ಚು ಗ್ರಾಮಗಳ ಜನತೆ ನೆರೆಹಾವಳಿಗೆ ಸಿಲುಕಿದ್ದಾರೆ. 1800ಕ್ಕೂ ಹೆಚ್ಚು ಕುಟುಂಬಗಳು ಅತಂತ್ರವಾಗಿವೆ. ಜಿಲ್ಲೆಯಲ್ಲಿ 20 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ನೆರೆಪೀಡಿತ ಪ್ರದೇಶಗಳ ಜನರನ್ನು ಕಾಳಜಿ ಕೇಂದ್ರಗಳಿಗೆ ಶಿಫ್ಟ್ ಮಾಡಲಾಗುತ್ತಿದೆ. ಗೋಕಾಕ್ ತಾಲೂಕಿನಲ್ಲಿ ಘಟಪ್ರಭಾ ನದಿ ಪ್ರವಾಹದಿಂದಾಗಿ ತಾಲೂಕಿನ ಬಹುತೇಕ ಗ್ರಾಮಗಳು ಮುಳುಗಡೆಯಾಗಿವೆ.