ಬೆಳಗಾವಿ: ಪಶ್ಚಿಮ ಘಟ್ಟ, ಮಹಾರಾಷ್ಟ್ರ ಭಾಗದಲ್ಲಿ ವರುಣಾರ್ಭಟ ಜೋರಾಗಿದ್ದು, ನದಿಗಳು ಅಪಾಯದಮಟ್ಟದಲ್ಲಿ ಹರಿಯುತ್ತಿವೆ. ಧಾರಾಕಾರ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಾಲ್ಕು ಸೇತುವೆಗಳು ಮುಳುಗಡೆಯಾಗಿವೆ.
ಪಶ್ಚಿಮ ಘಟ್ಟ ಭಾಗದಲ್ಲಿ ಧಾರಾಕಾರ ಮಳೆಯಿಂದಾಗಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಯಲ್ಲಿ ಒಳಹರಿವು ಹೆಚ್ಚಾಗಿದ್ದು, ಸುತ್ತಮುತ್ತಲಿನ ಗ್ರಾಮಗಳು ಮುಳುಗಡೆಯಾಗಿವೆ.
ಕೃಷ್ಣಾ ನದಿಗೆ 55 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಚಿಕ್ಕೋಡಿ ತಾಲೂಕಿನ ನಾಲ್ಕು ಸೇತುವೆಗಳು ಕೃಷ್ಣಾನದಿಯಲ್ಲಿ ಮುಳುಗಿವೆ. ಸೇತುವೆ ಮೇಲಿಂದ ನೀರು ರಭಸವಾಗಿ ಹರಿಯುತ್ತಿದ್ದು, ಈ ಭಾಗದ ಗ್ರಾಮಗಳು ಜಲಾವೃತಗೊಂಡಿವೆ.
ನಿಪ್ಪಾಣಿ, ಕುನ್ನೂರು-ಬಾರವಾಡ, ಕಾರದಾಗ-ಬೋಜ್, ಕುನ್ನೂರು-ಭೋಜವಾಡಿ ಸೇರಿದಂತೆ ಒಟ್ಟು ನಾಲ್ಕು ಸೇತುವೆಗಳು ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕವೇ ಕಡಿತಗೊಂಡಿದೆ.
ಇನ್ನು ಮಲಪ್ರಭಾ ನದಿಯ ಅಬ್ಬರಕ್ಕೆ ಖಾನಾಪುರ ತಾಲೂಕಿನ ಹಬ್ಬನಟ್ಟಿ ಗ್ರಾಮದಲ್ಲಿರುವ ಪ್ರಸಿದ್ಧ ಮಾರುತಿ ಮಂದಿರ ನೀರಿನಲ್ಲಿ ಮುಳುಗಿದೆ. ಮಲಪ್ರಭಾ, ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.