alex Certify ಆಸ್ಪತ್ರೆಗಳಲ್ಲಿ ಬೆಡ್‌ಶೀಟ್‌ ಮತ್ತು ಬಟ್ಟೆಗಳ ಬಣ್ಣ ಬಿಳಿ ಅಥವಾ ತಿಳಿ ಬಣ್ಣದಲ್ಲಿಯೇ ಏಕಿರುತ್ತದೆ….? ಇದಕ್ಕೂ ಇದೆ ವೈಜ್ಞಾನಿಕ ಕಾರಣ………..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಗಳಲ್ಲಿ ಬೆಡ್‌ಶೀಟ್‌ ಮತ್ತು ಬಟ್ಟೆಗಳ ಬಣ್ಣ ಬಿಳಿ ಅಥವಾ ತಿಳಿ ಬಣ್ಣದಲ್ಲಿಯೇ ಏಕಿರುತ್ತದೆ….? ಇದಕ್ಕೂ ಇದೆ ವೈಜ್ಞಾನಿಕ ಕಾರಣ………..!

ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಆಸ್ಪತ್ರೆ ಮೆಟ್ಟಿಲು ಹತ್ತಿರ್ತಾರೆ. ಅನಾರೋಗ್ಯದಿಂದ, ಚಿಕಿತ್ಸೆಗಾಗಿ ಅಥವಾ ಸ್ನೇಹಿತರು, ಸಂಬಂಧಿಕರ ಯೋಗಕ್ಷೇಮವನ್ನು ವಿಚಾರಿಸಲು ಆಸ್ಪತ್ರೆಗೆ ಹೋಗಿರುತ್ತೇವೆ. ಈ ಸಮಯದಲ್ಲಿ ಎಲ್ಲರೂ ಗಮನಿಸಬೇಕಾದ ಅಂಶವೆಂದರೆ ಆಸ್ಪತ್ರೆಯಲ್ಲಿ ಬೆಡ್‌ಶೀಟ್‌ಗಳು ಮತ್ತು ಸಿಬ್ಬಂದಿಯ ಬಟ್ಟೆಗಳ ಬಣ್ಣ ಬಿಳಿ ಅಥವಾ ತಿಳಿ ಬಣ್ಣದಲ್ಲಿರುತ್ತದೆ. ಇದಕ್ಕೂ ವೈಜ್ಞಾನಿಕ ಕಾರಣಗಳಿವೆ.

ಸ್ವಚ್ಛತೆ

ಬಿಳಿ ಮತ್ತು ತಿಳಿ ಬಣ್ಣದ ಬಟ್ಟೆಗಳು, ಬೆಡ್‌ಶೀಟ್‌ಗಳಲ್ಲಿ ಕೊಳಕು,  ಕಲೆಗಳು ಸುಲಭವಾಗಿ ಗೋಚರಿಸುತ್ತವೆ. ಈ ಕಾರಣದಿಂದಾಗಿ ಅವುಗಳನ್ನು ಸ್ವಚ್ಛಗೊಳಿಸುವ ಮತ್ತು ತೊಳೆಯುವ ಸಮಯದಲ್ಲಿ ಸುಲಭವಾಗಲೆಂದು ಆಸ್ಪತ್ರೆಗಳಲ್ಲಿ ಇವನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲ ರಕ್ತ, ಔಷಧಿ ಅಥವಾ ಇತರ ಕೊಳಕು ಇದ್ದರೆ ಅದನ್ನು ತಕ್ಷಣವೇ ಸ್ವಚ್ಛಗೊಳಿಸಬಹುದು. ಇದು ಸೋಂಕುಗಳು ಮತ್ತು ರೋಗಗಳ ಹರಡುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಬಿಳಿ ಬಣ್ಣವನ್ನು ಶುಚಿತ್ವ ಮತ್ತು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇದು ಆಸ್ಪತ್ರೆಯ ಪರಿಸರಕ್ಕೆ ಸೂಕ್ತವಾಗಿದೆ.

ಮಾನಸಿಕ ಶಾಂತಿ

ಬಿಳಿ ಮತ್ತು ತಿಳಿ ಬಣ್ಣಗಳು ಸಹ ಮಾನಸಿಕ ಪರಿಣಾಮಗಳನ್ನು ಹೊಂದಿವೆ. ಬಿಳಿ ಬಣ್ಣವು ಶಾಂತಿ, ಸಮತೋಲನವನ್ನು ಸಂಕೇತಿಸುತ್ತದೆ. ರೋಗಿಗಳು ಆಸ್ಪತ್ರೆಯಲ್ಲಿದ್ದಾಗ ಮಾನಸಿಕ ಮತ್ತು ದೈಹಿಕ ಒತ್ತಡಕ್ಕೆ ಒಳಗಾಗುತ್ತಾರೆ. ಬಿಳಿ ಮತ್ತು ತಿಳಿ ಬಣ್ಣದ ಪರಿಸರವು ಅವರಿಗೆ ಮಾನಸಿಕ ಶಾಂತಿಯನ್ನು ನೀಡುತ್ತದೆ. ಇದಲ್ಲದೆ ಬಿಳಿ ಬಣ್ಣವನ್ನು ಭರವಸೆ ಮತ್ತು ಸಕಾರಾತ್ಮಕತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ರೋಗಿಗಳಿಗೆ ಚೇತರಿಸಿಕೊಳ್ಳಲು ಪ್ರೇರೇಪಿಸುತ್ತದೆ.

ಪ್ರಾಯೋಗಿಕ ಕಾರಣ

ಆಸ್ಪತ್ರೆಗಳಲ್ಲಿ ಬಿಳಿ ಮತ್ತು ತಿಳಿ ಬಣ್ಣದ ಬಟ್ಟೆಗಳು, ಬೆಡ್‌ಶೀಟ್‌ಗಳ ಬಳಕೆ ಪ್ರಾಯೋಗಿಕ ದೃಷ್ಟಿಕೋನದಿಂದ ಸಹ ಪ್ರಯೋಜನಕಾರಿಯಾಗಿದೆ. ಬಿಸಿಲಿನಲ್ಲಿ ಬಿಳಿ ಬಟ್ಟೆಗಳು ಬೇಗನೆ ಒಣಗುತ್ತವೆ ಮತ್ತು ಅವುಗಳ ಬಣ್ಣವು ಸ್ಥಿರವಾಗಿರುತ್ತದೆ. ಇದಲ್ಲದೆ ಬಿಳಿ ಬಟ್ಟೆಗಳನ್ನು ಹೆಚ್ಚಿನ ತಾಪಮಾನದಲ್ಲಿ ತೊಳೆಯಬಹುದು. ಇದರಿಂದ  ಅವುಗಳಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಸಂಪೂರ್ಣವಾಗಿ ನಾಶವಾಗುತ್ತವೆ.

ಆರೋಗ್ಯ ಸಂಬಂಧಿ ಅಂಶಗಳು

ಆರೋಗ್ಯದ ದೃಷ್ಟಿಯಿಂದ ಬಿಳಿ ಮತ್ತು ತಿಳಿ ಬಣ್ಣದ ಬಟ್ಟೆ,  ಬೆಡ್‌ಶೀಟ್‌ಗಳ ಬಳಕೆ ಮುಖ್ಯವಾಗಿದೆ. ಬಿಳಿ ಬಣ್ಣದ ಬಟ್ಟೆಗಳು ಹೈಪೋಲಾರ್ಜನಿಕ್ ಆಗಿದ್ದು, ಅಲರ್ಜಿಯನ್ನು ಉಂಟುಮಾಡುವ ಸಾಧ್ಯತೆ ಕಡಿಮೆ. ಇದಲ್ಲದೆ ಬಿಳಿ ಬಣ್ಣವು ಬೆಳಕನ್ನು ಪ್ರತಿಬಿಂಬಿಸುತ್ತದೆ. ಕೊಠಡಿಗಳನ್ನು ಪ್ರಕಾಶಮಾನವಾಗಿರಿಸುತ್ತದೆ ಮತ್ತು ಸೂಕ್ಷ್ಮಜೀವಿಗಳ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ.

ಮಾನದಂಡ ಮತ್ತು ಸಂಪ್ರದಾಯ

ಆಸ್ಪತ್ರೆಗಳಲ್ಲಿ ಬಿಳಿ ಮತ್ತು ತಿಳಿ ಬಣ್ಣಗಳ ಬಳಕೆಯು ಒಂದು ರೀತಿಯ ಮಾನದಂಡವಾಗಿದೆ. ಈ ಸಂಪ್ರದಾಯವು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಬಣ್ಣವು ಶುಚಿತ್ವ ಮತ್ತು ಆರೋಗ್ಯಕ್ಕೆ ಮಾತ್ರ ಮುಖ್ಯವಲ್ಲ, ಆಸ್ಪತ್ರೆಯ ವೃತ್ತಿಪರ ಮತ್ತು ಕ್ಲೀನ್ ಇಮೇಜ್ ಅನ್ನು ಸಹ ಇದು ಪ್ರತಿಬಿಂಬಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...