
ಉತ್ತರ ಕನ್ನಡದ ಶಿರಸಿಯಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ನಡೆಯುವ ಬೇಡರ ವೇಷ ಜನ ಮನಸೂರೆಗೊಂಡಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಬೇಡರ ವೇಷವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಜನ ಬರುತ್ತಾರೆ. ರಾತ್ರಿಯಾಗುತ್ತಿದ್ದಂತೆ ಶಿರಸಿಯಲ್ಲಿ ಬೇರೆಯದೇ ಆದ ಲೋಕ ಸೃಷ್ಟಿಯಾಗುತ್ತದೆ.
ನವಿಲುಗರಿಗಳನ್ನು ಜೋಡಿಸಿ ಬೆನ್ನಿಗೆ ಕಟ್ಟಿಕೊಂಡು ಖಡ್ಗವನ್ನು ಝಳಪಿಸುತ್ತ ಬೇಡ ವೇಷಧಾರಿಗಳು ಮಾಡುವ ಜಾನಪದ ನೃತ್ಯ ಸುಮಾರು 300 ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಇದು ಕರ್ನಾಟಕದ ಅತಿ ದೊಡ್ಡ ಜಾನಪದ ಹೋಳಿ ಆಚರಣೆಯಾಗಿದೆ.
ಹೋಳಿ ಹಬ್ಬದ ದಿನ ಸಮೀಪಿಸುತ್ತಿರುವಂತೆ ಬೇಡ ವೇಷಧಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಾರೆ. ಅವರ ವೇಷಭೂಷಣವೇ ಅದ್ಭುತವಾಗಿರುತ್ತದೆ. ಉದ್ದನೆಯ ಕೆಂಪು ಬಣ್ಣದ ನಿಲುವಂಗಿ, ಖಡ್ಗ, ನವಿಲುಗರಿ, ಮೀಸೆ, ಕೋರೆಹಲ್ಲು ಮೊದಲಾದವುಗಳೊಂದಿಗೆ ಅಲಂಕೃತಗೊಂಡ ವೇಷಧಾರಿಗಳು ಖಡ್ಗವನ್ನು ಝಳಪಿಸುತ್ತ ತಮಟೆ ವಾದ್ಯದ ಸದ್ದಿಗೆ ಕುಣಿಯುವುದು ನೋಡುಗರ ಮೈ ನವಿರೇಳಿಸುತ್ತದೆ.
ದಂತಕಥೆಯ ಪ್ರಕಾರ, ವಿಜಯನಗರ ರಾಜರ ನಂತರ ಸೋಂದಾ ರಾಜವಂಶವು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿತು. ಆಕ್ರಮಣಕಾರರ ದಾಳಿಯನ್ನು ತಡೆಯಲು ಬೇಡ ಸಮುದಾಯದ ಮಲ್ಲೇಶಿ ಎಂಬ ಯೋಧನನ್ನು ನಿಯೋಜಿಸಲಾಗಿದ್ದು ಆತ ಉತ್ತಮವಾಗಿ ಕಾರ್ಯನಿರ್ವಹಿಸಿದ.
ನಂತರ ಆತ ಕರ್ತವ್ಯ ಮರೆತು ಸ್ಥಳೀಯ ಮುಖಂಡರೊಬ್ಬರ ಪುತ್ರಿಯನ್ನು ಮದುವೆಯಾಗಲು ಮುಂದಾಗುತ್ತಾನೆ. ಆಕೆ ಧೈರ್ಯಶಾಲಿಯಾಗಿದ್ದು, ಸಮಾಜದ ಸುರಕ್ಷತೆ ದೃಷ್ಟಿಯಿಂದ ಹೋಳಿ ರಾತ್ರಿ ಆತನನ್ನು ಮದುವೆಯಾಗುತ್ತಾಳೆ. ಬಳಿಕ ನೃತ್ಯ ಮಾಡುವಾಗ ಅವನ ಕಣ್ಣಿಗೆ ಆಮ್ಲ ಎಸೆದು ಕುರುಡನನ್ನಾಗಿ ಮಾಡುತ್ತಾಳೆ. ಅವನು ಆಕೆಯನ್ನು ಕೊಲ್ಲಲು ಬೆನ್ನಟ್ಟಿದಾಗ 12 ಗ್ರಾಮಸ್ಥರು ಆತನನ್ನು ಹಿಡಿದು ಜೀವಂತವಾಗಿ ಸುಟ್ಟು ಹಾಕುತ್ತಾರೆ. ಮಹಿಳೆ ಸತಿ ಸಹಗಮನವಾಗುತ್ತಾಳೆ. ಆಕೆಯ ತ್ಯಾಗದ ಸ್ಮರಣೆಯಲ್ಲಿ ಬೇಡರ ವೇಷ ಆರಂಭವಾಗಿದ್ದು, ಇಂದಿಗೂ ನಡೆದುಕೊಂಡು ಬಂದಿದೆ ಎನ್ನಲಾಗಿದೆ.
ಹೋಳಿ ಹಬ್ಬಕ್ಕೆ ನಾಲ್ಕು ದಿನ ಇರುವಾಗ ಬೇಡರ ವೇಷದ ಅಬ್ಬರ ಆರಂಭವಾಗುತ್ತದೆ. ಹೋಳಿಯ ದಿನ ಇದಕ್ಕೆ ವಿರಾಮ ಬೀಳುತ್ತದೆ. ರಾತ್ರಿಯಿಂದ ಬೆಳಗಿನಜಾವದವರೆಗೂ ಬೇಡರ ವೇಷದ ಸಂಭ್ರಮ ಮನೆ ಮಾಡಿರುತ್ತದೆ. ಬೇಡರ ವೇಷದ ತಂಡಗಳು ನೃತ್ಯ ಮಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ. ಇದನ್ನು ನೋಡಲು ವಿವಿಧ ಕಡೆಯಿಂದಲೂ ಜನ ಬರುತ್ತಾರೆ.
ಆದರ್ಶ್ ಹೆಗ್ಡೆ ಎಂಬವರು ಈ ಜಾನಪದ ನೃತ್ಯ ಸಂಭ್ರಮವನ್ನು ಸರಣಿ ಟ್ವೀಟ್ ಮೂಲಕ ತೆರೆದಿಟ್ಟಿದ್ದಾರೆ.