
ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಕೆಲ ಶಾಸಕರು ಕೋವಿಡ್ ವಾರ್ ರೂಮ್ ನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿರುವ ಬಗ್ಗೆ ಆರೋಪಿಸಿದ ನಂತರ ಅಮಾನತುಗೊಂಡಿದ್ದ 17 ಮುಸ್ಲಿಂ ನೌಕರರನ್ನು ಮರು ನೇಮಕ ಮಾಡಿಕೊಳ್ಳಲಾಗಿದೆ.
ಮೇ 10 ರಿಂದ ಈ ನೌಕರರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕರು ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ್ದರು. ವಾರ್ ರೂಮ್ ನ 212 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು ಬೆಡ್ ನಿಯೋಜನೆ ವಿಭಾಗದಲ್ಲಿ ಒಬ್ಬರು ಮುಸ್ಲಿಂ ಸಮುದಾಯದವರು ಮಾತ್ರ ಇದ್ದಾರೆ.
ಕ್ರಿಸ್ಟಲ್ ಇನ್ಫೋ ಸಿಸ್ಟಮ್ಸ್ ಅಂಡ್ ಸರ್ವೀಸಸ್ ಸಂಸ್ಥೆ ಗುತ್ತಿಗೆ ಪಡೆದು ನೌಕರರನ್ನು ಬಿಬಿಎಂಪಿಗೆ ಕಳಿಸಿದೆ. ವಾರ್ ರೂಮ್ ನಲ್ಲಿ ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ನೌಕರರು ಭಾಗಿಯಾಗಿಲ್ಲ. ಅವರನ್ನು ಮರುನೇಮಕ ಮಾಡಿಕೊಳ್ಳಬೇಕೆಂದು ಸಂಸ್ಥೆಯ ಅಧಿಕಾರಿಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಉಸ್ತುವಾರಿ ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಅವರು ಅಮಾನತು ರದ್ದು ಮಾಡಿ ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಲು ಮುಂದಾಗಿದ್ದು, ಇಂದಿನಿಂದಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಲಾಗಿದೆ.