
ಶಿವಮೊಗ್ಗ: ತೋಟಕ್ಕೆ ಮೇಕೆಗಳು ಹೆಣ್ಣು ನುಗ್ಗಿದ್ದರಿಂದ ಅವುಗಳನ್ನು ಮೇಯಿಸುತ್ತಿದ್ದ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶಿಕಾರಿಪುರ ತಾಲೂಕಿನ ಚಿಕ್ಕಜೋಗಿಹಳ್ಳಿ ಗ್ರಾಮದ 50 ವರ್ಷದ ದಲಿತ ಮಹಿಳೆ ಹಲ್ಲೆಗೊಳಗಾಗಿದ್ದಾರೆ. ಅವರನ್ನು ಸ್ಥಳೀಯರು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂರು ದಿನ ಚಿಕಿತ್ಸೆ ಪಡೆದ ಮಹಿಳೆ ಮನೆಗೆ ಮರಳಿದ್ದಾರೆ.
ಆರಂಭದಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ದಲಿತ ಸಂಘಟನೆಗಳ ಮಧ್ಯಪ್ರವೇಶದಿಂದ ಫೆಬ್ರವರಿ 25ರಂದು ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಹೇಳಲಾಗಿದೆ.
10ಕ್ಕೂ ಹೆಚ್ಚು ಮೇಕೆಗಳು ತೋಟಕ್ಕೆ ನುಗ್ಗಿ ಗಿಡಗಳ ಎಲೆ ತಿಂದಿದ್ದವು. ಇದರಿಂದ ಆಕ್ರೋಶಗೊಂಡ ತೋಟದ ಮಾಲೀಕ ರಾಮನಹಳ್ಳಿ ಶಿವಕುಮಾರ್ ಎಂಬುವರ ಮಗ ಅರುಣ್ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ. ವಿವಸ್ತ್ರಗೊಳಿಸಿ ಮರಕ್ಕೆ ಕಟ್ಟಿಹಾಕಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ತಪ್ಪಿಸಿಕೊಂಡು ಓಡಿ ಬಂದಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.