ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಬೆಳಲಮಕ್ಕಿಯಲ್ಲಿ ತನ್ನ ಪತ್ನಿಯೊಂದಿಗೆ ಎದುರು ಮನೆಯ ಯುವಕ ಮಾತನಾಡಿಸುತ್ತಿದ್ದ ಕಾರಣಕ್ಕೆ ವತಿರಾಯ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಕುಡಿಯುವ ನೀರು ಪೂರೈಕೆ ಘಟಕದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಯಲಕುಂದ್ಲಿಯ ನವೀನ್, ಆತನ ಸ್ನೇಹಿತ ಧರೇಶ್ ಹಲ್ಲೆಗೊಳಗಾದವರು. ನವೀನ್ ತಮ್ಮ ಎದುರು ಮನೆಯ ರವಿ ಪತ್ನಿಯೊಂದಿಗೆ ಮಾತನಾಡಿದ ಕಾರಣಕ್ಕೆ ರವಿ ರೊಚ್ಚಿಗೆದ್ದು ನವೀನ್ ಮೇಲೆ ಹಲ್ಲೆ ನಡೆಸಿದ್ದಾನೆ. ಕತ್ತಿ ಮತ್ತು ರಾಡ್ ನಿಂದ ನವೀನ್ ಕಾರ್ ಮೇಲೆ ದಾಳಿ ಮಾಡಿದ್ದು, ಮನೆಯಿಂದ ಹೊರ ಬಂದ ನವೀನ್ ತನ್ನ ಕಾರಿನ ಗಾಜು ಏಕೆ ಹಾಳು ಮಾಡುತ್ತಿರುವೆ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ರವಿ ಕತ್ತಿಯಿಂದ ನವೀನ್ ಮೇಲೆ ದಾಳಿ ಮಾಡಿದ್ದಾನೆ. ಜಗಳ ಬಿಡಿಸಲು ಬಂದ ನವೀನ್ ಸ್ನೇಹಿತ ಧರೇಶ್ ಮೇಲೆಯೂ ಹಲ್ಲೆ ಮಾಡಿದ್ದಾನೆ. ನವೀನ್ ಬೆರಳು ತುಂಡಾಗಿದ್ದು, ಎದೆ ಭಾಗಕ್ಕೆ ತೀವ್ರ ಗಾಯವಾಗಿದೆ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಸ್ವರೂಪ ಗಾಯಗಳಾಗಿರುವ ಧರೇಶ್ ನನ್ನು ಶಿವಮೊಗ್ಗದ ಮೆಗನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾಗರ ಪೇಟೆ ಠಾಣೆ ಪೊಲೀಸರು ಆರೋಪಿ ರವಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ.