
ಕೊಪ್ಪಳ: ಬಿಜೆಪಿಗೆ ಮತ ಹಾಕುತ್ತೇವೆ ಎಂದಿದ್ದಕ್ಕೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ. ಕೊಪ್ಪಳ ತಾಲೂಕಿನ ಯಲಮಗೇರಿ ಗ್ರಾಮದಲ್ಲಿ ಕಳೆದ ರಾತ್ರಿ ದ್ಯಾಮಣ್ಣ ಬಾಲನಗೌಡರ ಮತ್ತು ಕುಟುಂಬದವರ ಮೇಲೆ ಎಂಟಕ್ಕೂ ಹೆಚ್ಚು ಜನರು ಹಲ್ಲೆ ನಡೆಸಿದ್ದಾರೆ.
ಘಟನೆಯಿಂದ ಗಾಯಗೊಂಡ ದ್ಯಾಮಣ್ಣರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾಂಗ್ರೆಸ್ ಪರವಾಗಿ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದರು. ಗ್ರಾಮದಲ್ಲಿ ಪ್ರಚಾರ ನಡೆಸುವಾಗ ದ್ಯಾಮಣ್ಣ ಅವರ ಮನೆಗೆ ಬಂದು ಕಾಂಗ್ರೆಸ್ ಗೆ ಮತ ಹಾಕುವಂತೆ ಕೋರಿದ್ದಾರೆ. ಈ ವೇಳೆ ದ್ಯಾಮಣ್ಣ ನಾನು ಬಿಜೆಪಿಗೆ ಮತ ಹಾಕುತ್ತೇನೆ ಎಂದು ಹೇಳಿದ್ದು, ಜಗಳವಾಗಿ ಗವಿಸಿದ್ದಪ್ಪ, ಗಂಗಣ್ಣ, ನೀಲಪ್ಪ, ಬಸವರಾಜ ಸೇರಿದಂತೆ ಎಂಟಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ದ್ಯಾಮಣ್ಣ ಮತ್ತು ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.