
ಮಂಗಳೂರು: ಮಂಗಳೂರು ಬಸ್ ನಿಲ್ದಾಣದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪ್ರಕಾಶ್, ರಾಘವೇಂದ್ರ, ರಂಜಿತ್, ಪವನ್ ಬಂಧಿತ ಆರೋಪಿಗಳೆನ್ನಲಾಗಿದೆ. ನಿನ್ನೆ ಮಂಗಳೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿತ್ತು. ಬಸ್ ನಲ್ಲಿ ಕುಳಿತುಕೊಂಡಿದ್ದ ಯುವಕ ಮತ್ತು ಯುವತಿಯನ್ನು ಪ್ರಶ್ನಿಸಿ ಹಲ್ಲೆ ಮಾಡಲಾಗಿತ್ತು. ನಿರ್ವಾಹಕ ಮತ್ತು ಕೆಲವು ಯುವಕರು ಸೇರಿಕೊಂಡು ಯುವಕನ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿತ್ತು.
ಬಸ್ ನಲ್ಲಿ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಅನ್ಯಕೋಮಿನ ಯುವಕನಿಗೆ ಥಳಿಸಲಾಗಿತ್ತು. ವಾಮಂಜೂರು ಸಮೀಪದ ಖಾಸಗಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿ ಉಡುಪಿಗೆ ಹೋಗಲು ಮಂಗಳೂರು ಬಸ್ ನಿಲ್ದಾಣದಲ್ಲಿದ್ದ ಬಸ್ ನಲ್ಲಿ ಕುಳಿತುಕೊಂಡಿದ್ದ ವೇಳೆ ಅವರು ಅಸಭ್ಯವಾಗಿ ವರ್ತಿಸಿದ್ದರೆನ್ನಲಾಗಿದೆ. ಇದನ್ನು ಗಮನಿಸಿ ಬಸ್ ನಿರ್ವಾಹಕ ಮತ್ತು ಯುವಕರ ತಂಡ ಯುವಕನ ಮೇಲೆ ಹಲ್ಲೆ ನಡೆಸಿದ್ದರೆನ್ನಲಾಗಿದೆ.