
ಚಿಕ್ಕಮಗಳೂರು: ಅನಾಥಾಶ್ರಮದಲ್ಲಿ ವೃದ್ಧೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಹೊನ್ನೆಕೊಡಿಗೆಯಲ್ಲಿ ನಡೆದಿದೆ.
ಹೊನ್ನೆಕೊಡಿಗೆಯ ರಜಿತಾ ಸ್ನೇಹ ಅನಾಥಾಶ್ರಮದಲ್ಲಿ 69 ವರ್ಷದ ರತ್ನಮ್ಮ ಅವರಿಗೆ ಚಿತ್ರ ಹಿಂಸೆ ನೀಡಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ರಜಿನಾ ಸ್ನೇಹ ಆಶ್ರಮ ಟ್ರಸ್ಟ್ ಮುಖ್ಯಸ್ಥ ಹಲ್ಲೆ ಮಾಡಿದ್ದಾನೆ ಎನ್ನಲಾಗಿದ್ದು, ರತ್ನಮ್ಮ ಅವರ ಮೈತುಂಬ ಬಾಸುಂಡೆ ಗುರುತುಗಳು, ತಲೆಗೆ ಗಂಭೀರ ಗಾಯಗಳಾಗಿವೆ.
ಅವರಿಗೆ ಚಿತ್ರಹಿಂಸೆ ನೀಡಿ ಮನಸೋ ಇಚ್ಛೆ ಥಳಿಸಲಾಗಿದೆ. ರತ್ನಮ್ಮ ಅವರನ್ನು ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸನ ಜಿಲ್ಲೆಯ ಚೆನ್ನಳ್ಳಿ ಗ್ರಾಮದ ರತ್ನಮ್ಮ ಅವರನ್ನು ಒಂದೂವರೆ ತಿಂಗಳ ಹಿಂದೆ ಅನಾಥಾಶ್ರಮಕ್ಕೆ ಸೇರಿಸಲಾಗಿತ್ತು. ಕುಟುಂಬದವರು ಮನೆಗೆ ವಾಪಸ್ ಕರೆದುಕೊಂಡು ಹೋಗಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಆಶ್ರಮದ ಮುಖ್ಯಸ್ಥ ಲಿಜೇಶ್ ಹಲ್ಲೆ ನಡೆಸಿದ ಆರೋಪವಿದ್ದು, ಎನ್.ಆರ್. ಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ರಬ್ಬರ್ ತೋಟದಲ್ಲಿರುವ ಅನಾಥಾಶ್ರಮದಲ್ಲಿ ಮೂಲಸೌಕರ್ಯಗಳಿಲ್ಲ. ವಿವಿಧ ರೋಗದಿಂದ ಬಳಲುತ್ತಿರುವ 38 ವೃದ್ಧರಿದ್ದಾರೆ ಎನ್ನಲಾಗಿದೆ.