ಬೆಂಗಳೂರು: ಆತ್ಮ ರಕ್ಷಣೆಗಾಗಿ ನಡೆಸಿದ ಹಲ್ಲೆ ಅಪರಾಧವಲ್ಲ ಎಂದು ಜಮೀನು ವ್ಯಾಜ್ಯದಲ್ಲಿ ಹಲ್ಲೆ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಆತ್ಮ ರಕ್ಷಣೆಗಾಗಿ ಪ್ರತಿ ದಾಳಿ ನಡೆಸುವ ಸಂದರ್ಭದಲ್ಲಿ ಹಲ್ಲೆ ನಡೆಸಲು ಮುಂದಾದರೆ ಅದು ಅಪರಾಧವಾಗುವುದಿಲ್ಲ ಎಂದು ಹೇಳಿದ ಹೈಕೋರ್ಟ್ ಸಹೋದರ ಸಂಬಂಧಿಗಳ ಮೇಲೆ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಆರೋಪದಿಂದ ಮೂವರನ್ನು ಖುಲಾಸೆಗೊಳಿಸಿದೆ.
ರಾಮನಗರದ ನಾಗೇಶ್, ರಾಮಕೃಷ್ಣ ಮತ್ತು ಜಯರಾಮ್ ಅವರು ಶಿಕ್ಷೆ ವಿಧಿಸಿದ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ಆತ್ಮ ರಕ್ಷಣೆಯಿಂದ ಪ್ರತಿದಾಳಿ ನಡೆಸಿರುವುದು ಸಾಬೀತಾದರೆ ನ್ಯಾಯಾಲಯಕ್ಕೆ ಅದನ್ನು ಪರಿಗಣಿಸಲು ಮುಕ್ತ ಅವಕಾಶವಿದೆ. ವೈಯಕ್ತಿಕ ರಕ್ಷಣೆ ಹಕ್ಕು ಚಲಾವಣೆ ಯಾವುದೇ ಅಪರಾಧವಾಗುವುದಿಲ್ಲ ಎಂದು ಭಾರತೀಯ ದಂಡ ಸಮಿತಿ ಸೆಕ್ಷನ್ 99 ಸ್ಪಷ್ಟವಾಗಿ ಹೇಳುತ್ತದೆ. ಈ ಪ್ರಕರಣದಲ್ಲಿ ಅರ್ಜಿದಾರರ ವೈಯಕ್ತಿಕ ರಕ್ಷಣೆ ಹಕ್ಕನ್ನು ಪರಿಗಣಿಸುವಲ್ಲಿ ಅಧೀನ ಕೋರ್ಟ್ ಗಳು ವಿಫಲವಾಗಿವೆ ಎಂದು ಹೇಳಿದೆ.
ಗಾಯಗೊಂಡ ಸೋದರ ಸಂಬಂಧಿ ಆರೋಪಿಗಳ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದು, ಜಮೀನು ಬಳಿ ಆರೋಪಿಗಳು ತೆರಳಿದಾಗ ಗಲಾಟೆಯಾಗಿದೆ. ಆರೋಪಿಗಳು ಮಾರಕಾಸ್ತ್ರ ಹೊಂದಿದ್ದಕ್ಕೆ ಯಾವ ಸಾಕ್ಷಿ ಇಲ್ಲ. ಶಸ್ತ್ರ ರಹಿತರಾಗಿದ್ದ ಆರೋಪಿಗಳು ಆತ್ಮ ರಕ್ಷಣೆಗಾಗಿ ನಡೆಸಿದ ಪ್ರತಿ ದಾಳಿಯಿಂದ ಸೋದರ ಸಂಬಂಧಿಗಳು ಗಾಯಗೊಂಡಿದ್ದಾರೆ. ಹೀಗಾಗಿ ಅವರು ನಿರಪರಾಧಿಗಳಾಗಿದ್ದಾರೆ ಎಂದು ಅಧೀನ ಕೋರ್ಟ್ ಆದೇಶವನ್ನು ರದ್ದುಪಡಿಸಿದ ಹೈಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿದೆ.