
ರಾಮನಗರ: ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಹೇಮಾಪುರದ ಗ್ರಾಮ ದೇವರ ಉತ್ಸವದಲ್ಲಿ ಆರತಿ ತಟ್ಟೆ ಮುಟ್ಟಿದ ಪರಿಶಿಷ್ಟ ಸಮುದಾಯದ ಶಿಕ್ಷಕರೊಬ್ಬರ ಮೇಲೆ ಒಕ್ಕಲಿಗ ಸಮುದಾಯದವರು ಮನಬಂದಂತೆ ಥಳಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.
ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್.ಎಸ್. ಮಂಜುನಾಥ ಹಲ್ಲೆಗೊಳಗಾದ ಶಿಕ್ಷಕ. ಜೂನ್ 28ರಂದು ಘಟನೆ ನಡೆದಿದೆ. ಗ್ರಾಮ ದೇವತೆಯ ಉತ್ಸವದಲ್ಲಿ ಒಕ್ಕಲಿಗ ಸಮುದಾಯದವರು ಆರತಿ ತರುವಾಗ ಆಕಸ್ಮಿಕವಾಗಿ ಮಂಜುನಾಥ ಅವರಿಗೆ ಆರತಿ ತಾಗಿದೆ. ದೇವರಿಗೆ ಮೈಲಿಗೆ ಮಾಡಿದೆ ಎಂದು ಗ್ರಾಮದ ಲೋಕೇಶ್, ದೀಪಕ್, ವೆಂಕಟೇಶ್ ಮತ್ತು ಇತರರು ನಿಂದಿಸಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಅವರ ವಿರುದ್ಧ ದೂರು ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದಾರೆ.