
ರಾಮನಗರ ಜಿಲ್ಲೆ ಕನಕಪುರ ಕನಕಪುರ ತಾಲೂಕಿನ ಕುರುಬಳ್ಳಿದೊಡ್ಡಿ ಗ್ರಾಮದಲ್ಲಿ ರೌಡಿಶೀಟರ್ ಗಳು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಕುಳಿತುಕೊಂಡು ಆರೋಪಿಗಳು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಅವರನ್ನು ಪ್ರಶ್ನಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಯ ಜೊತೆಗೂ ಗಲಾಟೆ ಮಾಡಿ ವಾಹನಕ್ಕೆ ಬೆಂಕಿ ಹಚ್ಚಲು ಆರೋಪಿಗಳು ಮುಂದಾಗಿದ್ದಾರೆ.
112ಕ್ಕೆ ಕರೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸಾತನೂರು ಪೊಲೀಸರ ಜೊತೆಗೂ ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳು ಟ್ಯಾಬ್ ಹೊಡೆದು ಹಾಕಿದ್ದಾರೆ.
ರೌಡಿಶೀಟರ್ ಕಿರಣ್, ಸುಂದರ್, ಪ್ರತಾಪ್ ಅವರನ್ನು ಬಂಧಿಸಲಾಗಿದೆ. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.