ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಂತರಗಟ್ಟೆಯಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ ಪತಿ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ಒಂದು ತಿಂಗಳ ಹಿಂದೆ ಅಂತರಗಟ್ಟೆಯಲ್ಲಿ ರಥೋತ್ಸವ ನಡೆದಿದ್ದು, ತಿಂಗಳ ಪೂಜೆಗೆ ದಂಪತಿ ಮಕ್ಕಳೊಂದಿಗೆ ಹೋಗಿದ್ದಾರೆ. ದೇವಾಲಯ ಬಳಿ ಪತ್ನಿ, ಮಕ್ಕಳನ್ನು ಬಿಟ್ಟು ಪತಿ ಎಡೆ ಕೊಡಲು ದೇವಸ್ಥಾನಕ್ಕೆ ತೆರಳಿದ್ದಾನೆ. ಈ ವೇಳೆ ಅಲ್ಲಿಗೆ ಮಧ್ಯಪಾನ ಮಾಡಿ ಬಂದಿದ್ದ 6 ಮಂದಿ ದುರುಳರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.
ತಡೆಯಲು ಬಂದ ಪತಿಯನ್ನು ನೆಲಕ್ಕೆ ಬೀಳಿಸಿ ಆತನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಕೈಬೆರಳು ಮುರಿದಿದ್ದಾರೆ. ಮಗುವನ್ನು ಕೂಡ ಮೂಲೆಗೆ ತಳ್ಳಿದ್ದಾರೆ. ದಂಪತಿ ಅಜ್ಜಂಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆ ದಂಪತಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿದೆ.