ಬೇಸಿಗೆಯಲ್ಲಿ ಬಿಸಿಲು, ಆಯಾಸ ಜಾಸ್ತಿ. ಸ್ವಲ್ಪ ದೂರ ನಡೆಯಲು ಕೂಡ ಸುಸ್ತಾಗುತ್ತದೆ. ಬಿಸಿಲಿನಿಂದ ಜನ ಬಸವಳಿಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬಿಸಿಲಿನ ತಾಪ ಎಷ್ಟಿದೆ ಎಂದರೆ, ಸದೃಢವಾಗಿದ್ದವರು ಕೂಡ ಸುಸ್ತಾಗಿಬಿಡುತ್ತಾರೆ.
ಮಳೆಗಾಲದಲ್ಲಿ ಊಟ, ನಿದ್ದೆ ಬೇಸಿಗೆಯಲ್ಲಿ ನೀರು ಜಾಸ್ತಿ ಎಂಬ ಮಾತಿದೆ. ಬೇಸಿಗೆಯಲ್ಲಿ ನೀರನ್ನು ಜಾಸ್ತಿ ಕುಡಿಯಿರಿ. ಕಡಿಮೆ ಊಟ ಮಾಡಿ. ಹೊಟ್ಟೆ ತುಂಬ ಉಂಡರೆ ಆಯಾಸವಾಗುತ್ತದೆ. ನೀರು, ಹಣ್ಣು, ಎಳನೀರು, ತಂಪು ಪಾನೀಯಗಳು ಒಳ್ಳೆಯದು.
ಅತಿಯಾದ ಟೀ, ಕಾಫಿ, ಮಸಾಲೆ ಪದಾರ್ಥ, ಖಾರದ ಊಟ ಮೊದಲಾದವುಗಳನ್ನು ಬೇಸಿಗೆಯಲ್ಲಿ ಜಾಸ್ತಿ ಬಳಸುವುದು ಸರಿಯಲ್ಲ ಎನ್ನುತ್ತಾರೆ ತಿಳಿದವರು.
ಹೊರಗೆ ಹೋಗುವಾಗ, ಕೊಡೆ ಬಳಸುವುದು ಒಳ್ಳೆಯದು. ಇನ್ನು ತೆಳುವಾದ ಬಿಳಿ ಬಟ್ಟೆಗಳನ್ನು ಧರಿಸಿದಲ್ಲಿ ಬಿಸಿಲಿನ ಝಳ ಹೆಚ್ಚು ತಾಗುವುದಿಲ್ಲ. ಬೇಸಿಗೆಯಲ್ಲಿ ಧೂಳು ಜಾಸ್ತಿ. ಆಗಾಗ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ.
ತಣ್ಣೀರು ಬಳಸುವುದರಿಂದ ಚರ್ಮಕ್ಕೆ ಒಳ್ಳೆಯದು. ಧೂಳಿನಿಂದ ಮುಕ್ತವಾಗಲು ಆದಷ್ಟು ಪ್ರಯತ್ನಿಸಿ. ಇಲ್ಲವಾದರೆ, ಕೆಮ್ಮು, ಚರ್ಮದ ತುರಿಕೆ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಸಮಸ್ಯೆ ತಲೆದೋರಿದಲ್ಲಿ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ. ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಾಳಜಿ ವಹಿಸಿ.