ಈಗಂತೂ ಎಲ್ಲರ ಕೈಯಲ್ಲೂ ಮೊಬೈಲ್ ಕಾಣಬಹುದು. ಭಾರತದಲ್ಲಿ ಶೌಚಾಲಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಬಳಕೆಯಲ್ಲಿವೆ ಎನ್ನಲಾಗಿದೆ. ಅಲ್ಲದೇ, ಜನಸಂಖ್ಯೆಗಿಂತ ಹೆಚ್ಚು ಮೊಬೈಲ್ ಇವೆ ಎಂದೂ ಹೇಳಲಾಗುತ್ತದೆ.
ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ ನಿಜ. ಆದರೆ ಮೊಬೈಲ್ ಬಳಸುವ ಬಗ್ಗೆ ಬಹುತೇಕರಿಗೆ ಸರಿಯಾಗಿ ಮಾಹಿತಿಯೇ ಇರುವುದಿಲ್ಲ. ಮೊಬೈಲ್ ಚಾರ್ಜ್ ಆಗುತ್ತಿರುವಾಗಲೇ ಕೆಲವರು ಕಿವಿಗೆ ಪೋನ್ ಹಿಡಿದುಕೊಂಡು ಮಾತನಾಡುತ್ತಾರೆ. ಇದರಿಂದ ಅನೇಕ ದುರಂತಗಳು ಸಂಭವಿಸಿವೆ. ಆದರೂ ಜನಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಬಹುತೇಕರು ಮೊಬೈಲ್ ಬ್ಯಾಟರಿ ಚಾರ್ಜ್ ಆಗುತ್ತಿದ್ದರೂ ಮಾತನಾಡುತ್ತಾರೆ. ಇದು ಸರಿಯಾದ ಕ್ರಮವಲ್ಲ. ಒಂದೊಮ್ಮೆ ಈ ವೇಳೆ ಸ್ಪೋಟಿಸಿದರೆ ಶಾಶ್ವತ ಅಂಗವೈಕಲ್ಯ ಬರಬಹುದಾದ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಬಲ್ಲವರು.
ಕೆಲವರ ಮೊಬೈಲ್ ಬ್ಯಾಟರಿ ಊದಿಕೊಂಡಿರುತ್ತದೆ. ಆದರೂ ಬದಲಾಯಿಸುವ ಗೋಜಿಗೆ ಹೋಗುವುದಿಲ್ಲ. ಹೀಗೆ ದಪ್ಪನಾಗಿ ಊದಿಕೊಂಡ ಮೊಬೈಲ್ ಬ್ಯಾಟರಿಯಿಂದ ಅಪಾಯ ಸಂಭವಿಸಬಹುದಾದ ಸಾಧ್ಯತೆಗಳಿರುತ್ತವೆ. ಕೆಲವರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಯಾವುದೋ ಕಂಪನಿಯ ಬ್ಯಾಟರಿ ಖರೀದಿಸುತ್ತಾರೆ. ಅದರಿಂದ ಅಪಾಯ ಗ್ಯಾರಂಟಿ. ಅದರ ಬದಲಿಗೆ ಅಧಿಕೃತ ಕಂಪನಿಯ ಮೊಬೈಲ್ ಬ್ಯಾಟರಿ ಖರೀದಿಸಿದರೆ ಉತ್ತಮ.
ಮತ್ತೆ ಕೆಲವರು ವಾಹನ ಚಾಲನೆ ಮಾಡುವಾಗಲೂ ಮೊಬೈಲ್ ನಲ್ಲಿ ಮಾತನಾಡುತ್ತಾರೆ. ಇದರಿಂದ ಎಷ್ಟೋ ದುರಂತಗಳು ಸಂಭವಿಸಿವೆ. ಆದರೂ ಜನ ತಲೆ ಕೆಡಿಸಿಕೊಳ್ಳುವುದಿಲ್ಲ. ಕೆಲವು ಮೊಬೈಲ್ ಬ್ಯಾಟರಿಗಳು ಚಾರ್ಜ್ ಗೆ ಹಾಕಿದಾಗ ಬಹು ಬೇಗನೆ ಬಿಸಿಯಾಗುತ್ತವೆ. ಅದನ್ನು ಗಮನಿಸಿ ಅಧಿಕೃತ ಸರ್ವೀಸ್ ಸೆಂಟರ್ ಗಳಲ್ಲಿ ತೋರಿಸಬೇಕು ಎನ್ನುತ್ತಾರೆ ಮೊಬೈಲ್ ಬ್ಯಾಟರಿ ವ್ಯಾಪಾರಸ್ಥರು.
ಗುಡುಗು ಸಿಡಿಲಿನ ಸಂದರ್ಭದಲ್ಲಿ ಮೊಬೈಲ್ ನಲ್ಲಿ ಮಾತನಾಡುವಾಗ ಅಪಾಯ ಸಂಭವಿಸುವ ಸಾಧ್ಯತೆ ಇರುತ್ತದೆ ಈ ಬಗ್ಗೆ ಎಚ್ಚರಿಕೆ ವಹಿಸಿ. ನಿಮ್ಮ ಮೊಬೈಲ್ ಬಳಕೆ ಸುರಕ್ಷತೆಗೆ ಗಮನಹರಿಸಿ.