ಹಾಲು ಮತ್ತು ಮೊಸರು ಎರಡರ ಗುಣಗಳು ಬೇರೆ ಬೇರೆ. ಮೊಸರಿನಲ್ಲಿ ಹುಳಿಯ ಅಂಶ ಇರುವುದರಿಂದ ಇದು ಹುಳಿ ಅಂಶವಿರದ ಹಾಲನ್ನು ಕೆಡಿಸುತ್ತದೆ. ಇದರಿಂದ ಎಸಿಡಿಟಿ, ಗ್ಯಾಸ್, ವಾಂತಿ ಆಗುವ ಸಾಧ್ಯತೆ ಇರುತ್ತದೆ. ಇದೇ ರೀತಿ ಹಾಲಿನ ಜೊತೆ ಕಿತ್ತಳೆ ಜ್ಯೂಸ್ ಸೇವನೆ ಕೂಡ ಒಳ್ಳೆಯದಲ್ಲ.
ಹಾಲು – ಉಪ್ಪು
ಹಾಲಿನಲ್ಲಿ ವಿಟಮಿನ್, ಮಿನರಲ್, ಲ್ಯಾಕ್ಟೋಸ್, ಸಕ್ಕರೆ, ಪ್ರೊಟೀನ್ ಮುಂತಾದ ಅಂಶಗಳಿರುತ್ತವೆ. ಹಾಲಿನೊಂದಿಗೆ ಇತರ ಲವಣಯುಕ್ತ ಪದಾರ್ಥ ಸೇವಿಸುವುದರಿಂದ ಪ್ರತಿಕೂಲ ಪರಿಣಾಮ ಬೀರುತ್ತದೆ. ಬಹುಕಾಲ ಹಾಲಿನೊಂದಿಗೆ ಲವಣ ಪದಾರ್ಥಗಳನ್ನು ಸೇವಿಸಿದಲ್ಲಿ ಚರ್ಮದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ಹಾಲು, ಮೊಸರು – ಹಣ್ಣು
ಹಣ್ಣು ಮತ್ತು ಮೊಸರನ್ನು ಒಂದೇ ಬಾರಿ ತಿನ್ನುವುದರಿಂದ ಅವು ಜೀರ್ಣವಾಗುವುದಿಲ್ಲ. ಹಾಗೆಯೇ ಹಾಲಿನ ಜೊತೆಗೂ ಹಣ್ಣನ್ನು ಸೇವಿಸುವುದು ಒಳಿತಲ್ಲ. ಹಲವರು ಬಾಳೆಹಣ್ಣು ಮತ್ತು ಹಾಲನ್ನು ಒಮ್ಮೆಲೇ ಸೇವಿಸುತ್ತಾರೆ. ಇದರಿಂದ ಕಫ ಹೆಚ್ಚುತ್ತದೆ, ಜೀರ್ಣಕ್ರಿಯೆಗೂ ಪೆಟ್ಟು ಬೀಳುತ್ತದೆ.
ಹುಳಿ ಹಣ್ಣು – ಸಿಹಿ ಹಣ್ಣು
ಆಯುರ್ವೇದದ ಪ್ರಕಾರ ಕಿತ್ತಳೆ ಮತ್ತು ಬಾಳೆಹಣ್ಣನ್ನು ಒಮ್ಮೆಲೇ ತಿನ್ನುವ ಹಾಗಿಲ್ಲ. ಏಕೆಂದರೆ ಸಿಹಿ ಹಣ್ಣು ಬಿಡುಗಡೆ ಮಾಡುವ ಸಕ್ಕರೆಯ ಅಂಶವನ್ನು ಹುಳಿ ಹಣ್ಣು ತಡೆಗಟ್ಟುತ್ತದೆ. ಅಷ್ಟೇ ಅಲ್ಲದೇ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದಿಲ್ಲ. ಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ದೇಹಕ್ಕೆ ದೊರೆಯುವುದಿಲ್ಲ.
ಆಹಾರ – ನೀರು
ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಊಟದೊಂದಿಗೆ ನೀರು ಸೇವನೆ ತರವಲ್ಲ. ನಾವು ತಿಂದ ಆಹಾರ ಹೆಚ್ಚು ಹೊತ್ತು ಹೊಟ್ಟೆಯಲ್ಲಿದ್ದರೆ ಶರೀರಕ್ಕೆ ಪೋಷಕಾಂಶಗಳು ಹೆಚ್ಚು ಲಭಿಸುತ್ತವೆ. ಊಟದ ಸಮಯದಲ್ಲಿ ನೀರು ಹೆಚ್ಚಾಗಿ ಕುಡಿದರೆ ಶರೀರಕ್ಕೆ ಪೋಷಕಾಂಶಗಳು ಲಭ್ಯವಾಗುವುದಿಲ್ಲ.
ಪರೋಟಾ – ಮೊಸರು
ಪರೋಟಾ ರೀತಿಯ ಆಹಾರದ ಜೊತೆ ಮೊಸರನ್ನು ಸೇವಿಸಬಾರದು. ಏಕೆಂದರೆ ಮೊಸರಿನ ಫ್ಯಾಟ್ ಅಂಶಗಳು ಜೀರ್ಣವಾಗುವುದನ್ನು ತಡೆಹಿಡಿಯುತ್ತದೆ.
ಆಹಾರದೊಂದಿಗೆ ಮಜ್ಜಿಗೆ ಸೇವನೆ ದೇಹಕ್ಕೆ ತುಂಬ ಒಳ್ಳೆಯದು. ಇದರಿಂದ ಪೋಷಕಾಂಶಗಳು ಸಿಗುತ್ತವೆ ಮತ್ತು ಇದರಲ್ಲಿರುವ ಬ್ಯಾಕ್ಟೀರಿಯಾಗಳು ದೇಹಕ್ಕೆ ಒಳಿತನ್ನು ಮಾಡುತ್ತವೆ. ಹಾಗೆಯೇ ಈರುಳ್ಳಿ, ಬೆಳ್ಳುಳ್ಳಿಯನ್ನು ಒಟ್ಟಿಗೇ ಸೇವಿಸುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು.