ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ ಗ್ರಾಹಕರು ಎಚ್ಚರಿಕೆ ವಹಿಸುವುದು ಅಗತ್ಯ. ಮೊಬೈಲ್ ನಲ್ಲಿ ಅಪ್ಲಿಕೇಷನ್ ಡೌನ್ ಲೋಡ್ ಗೆ ಮುಂದಾದಾಗ ನಕಲಿ ಆಪ್ ಗಳು ಲಭ್ಯವಾಗುತ್ತಿದೆ.
ಶಕ್ತಿ ಯೋಜನೆ, ಗೃಹಜ್ಯೋತಿ ಯೋಜನೆಗಳಿಗಾಗಿ ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದ್ದು, ಕೆಲ ದಿನಗಳಲ್ಲೇ ಮನೆ ಯಜಮಾನಿಗೆ 2000 ರೂ ನೀಡುವ , ಗೃಹಲಕ್ಷ್ಮೀ ಯೋಜನೆ ಕೂಡ ಆರಂಭವಾಗಲಿದೆ. ಆದರೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಯೋಜನೆಗಳ ನಕಲಿ ಆಪ್ ಗಳು ತಲೆ ಎತ್ತಿವೆ. ಇದು ಸರ್ಕಾರವೇ ಬಿಡುಗಡೆ ಮಾಡಿರುವ ಆಪ್ ಎಂದು ಡೌನ್ ಲೋಡ್ ಮಾಡಿದರೆ ಸಂಕಷ್ಟಕ್ಕೆ ಸಿಲುಕುವುದು ಗ್ಯಾರಂಟಿ.
ನಕಲಿ ಆಪ್ ಗಳಿಂದ ನಮ್ಮ ಮೊಬೈಲ್ ಪರ್ಸನಲ್ ಡೀಟೇಲ್ಸ್ ಹಾಗೂ ಡೇಟಾ ಕಳುವಾಗುವ ಸಾಧ್ಯತೆ ಇದೆ. ಅಲ್ಲದೇ ನಕಲಿ ಆಪ್ ನಲ್ಲಿ ಅರ್ಜಿ ಸಲ್ಲಿಸಿದರೆ ನಮ್ಮ ಅಕೌಂಟ್ ನಲ್ಲಿರುವ ಹಣದ ಜೊತೆ ಇನ್ನಿತರ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆ ಇದೆ. ಸಧ್ಯ ಗೃಹಲಕ್ಷ್ಮೀ ಯೋಜನೆ ಹೆಸರಲ್ಲಿ ಪ್ಲೇ ಸ್ಟೋರ್ ನಲ್ಲಿ 5 ನಕಲಿ ಆಪ್ ಗಳು ತಲೆ ಎತ್ತಿವೆ. ಪ್ಲೇ ಸ್ಟೋರ್ ಆಪ್ ಮೂಲಕ ಅರ್ಜಿ ಸಲ್ಲಿಸುವ ಬದಲು ಸರ್ಕಾರದ ಸೇವಾ ಸಿಂಧು ಆಪ್ ಮೂಲಕವೇ ಅರ್ಜಿ ಸಲ್ಲಿಸುವುದು ಉತ್ತಮ.