ತಮ್ಮ ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆ ಮಾಡಲು ಕೊಡುವ ಪೋಷಕರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಒಂದು ವೇಳೆ ಅವರುಗಳು ಸಿಕ್ಕಿಬಿದ್ದರೆ ಪೋಷಕರು ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಹೌದು, ಇಂತಹ ಸಂದರ್ಭದಲ್ಲಿ ವಾಹನ ಜಫ್ತಿ ಮಾಡಿಕೊಳ್ಳುವುದರ ಜೊತೆಗೆ ಪೋಷಕರ ವಿರುದ್ದ ಕಲಂ 5(1) ಆಧಾರ 180 ಐ.ಎಂ.ವಿ ಕಾಯ್ದೆ ಅಡಿ (ರೂ.25,000 ದಂಡ ಮತ್ತು 03 ವರ್ಷಗಳ ಜೈಲುವಾಸ ಶಿಕ್ಷೆ) ಹಾಗೂ ಇತರ ಸೂಕ್ತ ಕಾನೂನಿನ ಅಡಿ ಕ್ರಮ ಕೈಗೊಳ್ಳಲಾಗುತ್ತದೆ.
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಈ ವಿಷಯ ತಿಳಿಸಿದ್ದು, ವಾಹನ ಚಾಲನಾ ಪರವಾನಿಗೆ ಇಲ್ಲದ ವ್ಯಕ್ತಿಗಳು ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳು ಮೋಟಾರು ವಾಹನ ಚಾಲನೆ ಮಾಡುವುದು ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಅಪರಾಧವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಮಕ್ಕಳ ಮತ್ತು ಸಾರ್ವಜನಿಕರ ಸುರಕ್ಷತೆಯಿಂದ ಅ.10 ರಿಂದ ಚಾಲನಾ ಪರವಾನಿಗೆ ಇಲ್ಲದ ವ್ಯಕ್ತಿಗಳು ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳು ಮೋಟಾರು ವಾಹನ ಚಾಲನೆ ಹಾಗೂ ವೀಲಿಂಗ್ ಮತ್ತು ರೇಸಿಂಗ್ ಮಾಡುವವರ ವಿರುದ್ಧ ಕಾನೂನಿನಾತ್ಮಕ ಕ್ರಮ ಜರುಗಿಸಲಾಗುವುದು.
ನಗರದಾದ್ಯಂತ ಶಾಲಾ-ಕಾಲೇಜು ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಇಂತಹ ಅಪರಾಧ ಹಾಗೂ ವಾಹನ ಪರಿಶೀಲನೆ ಮಾಡುವ ಬಗ್ಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದ್ದು, ಪೋಷಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮೋಟಾರು ವಾಹನಗಳನ್ನು ಚಾಲನೆ ಮಾಡಲು ನೀಡಿದ್ದಲ್ಲಿ ಅಂತಹ ವಾಹನಗಳನ್ನು ಜಪ್ತು ಮಾಡಿ ಕ್ರಮ ಕೈಗೊಳ್ಳಲಾಗುವುದು ಮತ್ತು ಪೋಷಕರ ವಿರುದ್ಧ ಕಲಂ 5(1) ಆಧಾರ 180 ಐ.ಎಂ.ವಿ ಕಾಯ್ದೆ ಅಡಿ (ರೂ.25,000 ದಂಡ ಮತ್ತು 03 ವರ್ಷಗಳ ಜೈಲುವಾಸ ಶಿಕ್ಷೆ) ಹಾಗೂ ಇತರ ಸೂಕ್ತ ಕಾನೂನಿನ ಅಡಿ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಪೋಷಕರು ಯಾವುದೇ ಕಾರಣಕ್ಕೂ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಬಾರದು ಎಂದು ಎಸ್‍ಪಿ ರಂಜಿತ್ ಕುಮಾರ್ ಬಂಡಾರು ಹೇಳಿದ್ದಾರೆ.