ಆಫೀಸ್ ಗೆ ಲೇಟಾಗುತ್ತೆ ಎಂದು ಗ್ಯಾಸ್ ಮೇಲೆ ತವಾ ಇಟ್ಟು ದೋಸೆ ಮಾಡುವುದಕ್ಕೆ ಹೊರಟರೆ ದೋಸೆ ಎಬ್ಬಿಸುವುದಕ್ಕೆ ಬರುವುದಿಲ್ಲ! ಕಬ್ಬಿಣದ ಕಾವಲಿಯ ಉಸಾಬರಿಯೇ ಬೇಡವೆಂದು ಕೆಲವರು ನಾನ್ ಸ್ಟಿಕ್ ತವಾಗಳನ್ನು ಹೆಚ್ಚೆಚ್ಚು ಬಳಸುವುದಕ್ಕೆ ಶುರು ಮಾಡಿದ್ದಾರೆ. ಆದರೆ ಈಗ ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಕಬ್ಬಿಣದ ಪಾತ್ರೆಗಳತ್ತ ಆಕರ್ಷಿತರಾಗುತ್ತಿದ್ದಾರೆ.
ಕಬ್ಬಿಣದ ತವಾಗಳನ್ನು ಸರಿಯಾಗಿ ಪಳಗಿಸಿದರೆ ಇದರಿಂದ ದೋಸೆ ತುಂಬಾ ಚೆನ್ನಾಗಿ ಬರುತ್ತದೆ. ಹೇಗೆ ಪಳಗಿಸಬಹುದು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಮೊದಲಿಗೆ ಬಿಸಿನೀರಿಗೆ ಸ್ವಲ್ಪ ಲಿಕ್ವೀಡ್ ಸೋಪ್ ಅನ್ನು ಹಾಕಿಕೊಂಡು ಅದರಿಂದ ತವಾವನ್ನು ಚೆನ್ನಾಗಿ ತೊಳೆದು ಒಂದು ಬಟ್ಟೆಯ ಸಹಾಯದಿಂದ ಒರೆಸಿ. ನಂತರ ಒಂದು ಚಿಕ್ಕ ಕಾಟನ್ ಬಟ್ಟೆ ಅಥವಾ ಟಿಶ್ಯೂ ಪೇಪರ್ ತೆಗೆದುಕೊಂಡು ಅದನ್ನು ಎಣ್ಣೆಯಲ್ಲಿ ಅದ್ದಿಕೊಂಡು ಇದನ್ನು ಆ ತವಾಕ್ಕೆ ಚೆನ್ನಾಗಿ ಉಜ್ಜಿ. ನಂತರ ಇದನ್ನು ಗ್ಯಾಸ್ ಮೇಲೆ ಇಟ್ಟು ಸ್ವಲ್ಪ ಬಿಸಿ ಮಾಡಿ ಒಂದು ಬಟ್ಟೆಯ ಸಹಾಯದಿಂದ ಇದರಲ್ಲಿರುವ ಎಣ್ಣೆಯ ಅಂಶವನ್ನು ಉಜ್ಜಿ ತೆಗೆಯಿರಿ. ಇದರಿಂದ ತವಾದಲ್ಲಿರುವ ಕೊಳಕೆಲ್ಲಾ ಹೋಗುತ್ತದೆ.
ಹಾಗೇ ತವಾಕ್ಕೆ 2 ಚಮಚ ಎಣ್ಣೆ, 1 ಚಮಚ ಅರಿಶಿನ ಹಚ್ಚಿ 2 ಗಂಟೆಗಳ ಕಾಲ ಸೂರ್ಯನ ಬಿಸಿಲಿನಲ್ಲಿ ಇಡಿ. 3 ದಿನ ಹೀಗೆ ಮಾಡಿ. ನಂತರ ಇದನ್ನು ಕ್ಲೀನ್ ಮಾಡಿ ಉಪಯೋಗಿಸಿದರೆ ದೋಸೆ ಚೆನ್ನಾಗಿ ಬರುತ್ತದೆ.