ಮಳೆಗಾಲದಲ್ಲಿ ನಿಸರ್ಗ ಹಚ್ಚಹಸಿರಿನಿಂದ ಕಂಗೊಳಿಸುತ್ತದೆ. ಆದರೆ ಮಾನ್ಸೂನ್ನಲ್ಲಿ ರೋಗಗಳ ಬಾಧೆಯೂ ಹೆಚ್ಚು. ಕೊಳಕು ನೀರಿನಲ್ಲಿ ಬೆಳೆಯುವ ರೋಗಾಣುಗಳು ಅನೇಕ ಮಾರಕ ಕಾಯಿಲೆಗಳಿಗೆ ಕಾರಣವಾಗುತ್ತವೆ. ಮಳೆಗಾಲದಲ್ಲಿ ಸೊಳ್ಳೆ, ನೊಣ ಮತ್ತು ಕಲುಷಿತ ಆಹಾರದ ಮೂಲಕ ಹರಡುವ ಕಾಯಿಲೆಗಳಿಂದ ದೂರವಿರಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಮಾನ್ಸೂನ್ ರೋಗಗಳು ಮತ್ತು ಅವುಗಳನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ತಿಳಿಯೋಣ.
ಮಲೇರಿಯಾ
ಮಲೇರಿಯಾ ಬಹಳ ಅಪಾಯಕಾರಿ ರೋಗಗಳಲ್ಲೊಂದು. ಮಲೇರಿಯಾಕ್ಕೆ ತುತ್ತಾದರೆ ಜ್ವರ ಮತ್ತು ಶೀತದ ರೋಗಲಕ್ಷಣಗಳು ಕಂಡುಬರುತ್ತವೆ. ರಕ್ತ ಪರೀಕ್ಷೆ ಮತ್ತು ಕ್ಷಿಪ್ರ ಮಲೇರಿಯಾ ಪ್ರತಿಜನಕ ಪರೀಕ್ಷೆಯ ಮೂಲಕ ಈ ಕಾಯಿಲೆಯನ್ನು ಪತ್ತೆ ಮಾಡಬಹುದು. ಮಲೇರಿಯಾದಿಂದ ದೂರವಿರಲು ಸೊಳ್ಳೆ ನಿವಾರಕ ಕ್ರೀಮ್, ಫುಲ್ ಸ್ಲೀವ್ ಬಟ್ಟೆ, ಸೊಳ್ಳೆ ಪರದೆಗಳು ಮತ್ತು ಕಿಟಕಿ ಪರದೆಗಳನ್ನು ಬಳಸಬೇಕು. ಮನೆಯ ಸುತ್ತಮುತ್ತ ನೀರು ಸಂಗ್ರಹವಾಗಲು ಬಿಡಬಾರದು ಮತ್ತು ಸೊಳ್ಳೆ ನಿವಾರಕಗಳನ್ನು ಬಳಸಬೇಕು.
ಡೆಂಗ್ಯೂ
ಜ್ವರ, ದದ್ದುಗಳು ಮತ್ತು ಕಣ್ಣುಗಳಲ್ಲಿ ನೋವು ಡೆಂಗ್ಯೂನ ಲಕ್ಷಣಗಳಾಗಿವೆ. ತೀವ್ರತರವಾದ ಪ್ರಕರಣಗಳಲ್ಲಿ ಇದು ರಕ್ತಸ್ರಾವ ಮತ್ತು ಅಂಗಗಳ ವೈಫಲ್ಯಕ್ಕೆ ಕಾರಣವಾಗಬಹುದು. ಡೆಂಗ್ಯೂ ಎನ್ಎಸ್1 ಪ್ರತಿಜನಕ ಪರೀಕ್ಷೆ, ಡೆಂಗ್ಯೂ ಐಜಿಎಂ ಪ್ರತಿಕಾಯ, ಡೆಂಗ್ಯೂ ಐಜಿಜಿ ಪ್ರತಿಕಾಯ, ಡೆಂಗ್ಯೂ ಪಿಸಿಆರ್ ಮತ್ತು ರಕ್ತದ ಎಣಿಕೆ ಮೂಲಕ ಡೆಂಗ್ಯೂ ರೋಗನಿರ್ಣಯ ಮಾಡಲಾಗುತ್ತದೆ. ಡೆಂಗ್ಯೂವಿನಿಂದ ತಪ್ಪಿಸಿಕೊಳ್ಳಲು ಸೊಳ್ಳೆಗಳಿಂದ ದೂರವಿರಬೇಕು. ಹಳೆಯ ಟೈರ್, ಹೂವಿನ ಕುಂಡ, ನಿರ್ಮಾಣ ಸ್ಥಳಗಳು ಮತ್ತು ಟ್ಯಾಂಕ್ಗಳಲ್ಲಿ ನೀರು ಸಂಗ್ರಹವಾಗಲು ಬಿಡಬಾರದು.
ಚಿಕೂನ್ಗುನ್ಯಾ
ಚಿಕೂನ್ಗುನ್ಯಾ ಜ್ವರ ಮತ್ತು ಕೀಲು ನೋವಿಗೆ ಕಾರಣವಾಗುತ್ತದೆ. ಇದನ್ನು ಚಿಕುನ್ಗುನ್ಯಾ IgM ಪ್ರತಿಕಾಯ ಪರೀಕ್ಷೆ ಮತ್ತು ಚಿಕುನ್ಗುನ್ಯಾ ಆರ್ಎನ್ಎ ಪಿಸಿಆರ್ ಮೂಲಕ ಕಂಡುಹಿಡಿಯಲಾಗುತ್ತದೆ. ಮಲೇರಿಯಾ ಮತ್ತು ಡೆಂಗ್ಯೂ ತಡೆಗಟ್ಟಿದ ಮಾರ್ಗಗಳ ಮೂಲಕವೇ ಚಿಕೂನ್ಗುನ್ಯಾವನ್ನು ಕೂಡ ತಡೆಗಟ್ಟಬಹುದು.
ಝೀಕಾ ವೈರಸ್
ಝಿಕಾ ವೈರಸ್ ಪಿಸಿಆರ್ ಮತ್ತು ಝಿಕಾ ವೈರಸ್ ಐಜಿಎಂ ಸೀರಮ್ ಮತ್ತು ಮೂತ್ರದ ಪ್ರತಿಕಾಯ ಪರೀಕ್ಷೆಯಿಂದ ಇದನ್ನು ಪತ್ತೆ ಮಾಡಲಾಗುತ್ತದೆ. ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್ಗುನ್ಯಾದಿಂದ ದೂರವಿರಲು ಬಳಸಿದ ಮಾರ್ಗಗಳಿಂದಲೇ ಝೀಕಾ ವೈರಸ್ ಅನ್ನು ಕೂಡ ತಡೆಗಟ್ಟಬಹುದು.
ಲೆಪ್ಟೊಸ್ಪಿರೋಸಿಸ್
ಜ್ವರ, ಶೀತ, ದದ್ದುಗಳು, ಕಾಮಾಲೆ ಮತ್ತು ಕಣ್ಣುಗಳು ಕೆಂಪಾಗುವುದು ಈ ಕಾಯಿಲೆಯ ಲಕ್ಷಣ. ಇದನ್ನು ಲೆಪ್ಟೊಸ್ಪೈರಾ IgM ಪ್ರತಿಕಾಯ ಪರೀಕ್ಷೆ ಮತ್ತು ಲೆಪ್ಟೊಸ್ಪೈರಾ ಪಿಸಿಆರ್ ಮೂಲಕ ಕಂಡುಹಿಡಿಯಲಾಗುತ್ತದೆ. ಇದನ್ನು ತಪ್ಪಿಸಬೇಕೆಂದರೆ ನೀರಿನಲ್ಲಿ ನಡೆಯಬೇಡಿ, ವಿಶೇಷವಾಗಿ ಕಾಲುಗಳ ಮೇಲೆ ಕಡಿತ ಅಥವಾ ಗಾಯಗಳಿದ್ದರೆ ನೀರಲ್ಲಿ ನೆನೆಯಬಾರದು. ಮನೆ ಮತ್ತು ಕೆಲಸದ ಸ್ಥಳದಲ್ಲಿ ಇಲಿಗಳನ್ನು ನಿಯಂತ್ರಿಸಿ. ಡಾಕ್ಸಿಸೈಕ್ಲಿನ್ ಕ್ಯಾಪ್ಸುಲ್ಗಳು ಲೆಪ್ಟೊಸ್ಪೈರೋಸಿಸ್ ಅನ್ನು ತಡೆಯಲು ಸಹಾಯ ಮಾಡುತ್ತದೆ.
ಟೈಫಾಯಿಡ್
ಟೈಫಾಯಿಡ್ ಇದ್ದರೆ ಜ್ವರ, ಹೊಟ್ಟೆ ನೋವು, ನಾಲಿಗೆಯ ಮೇಲೆ ಬಿಳಿ ಲೇಪನ ಮತ್ತು ಹಸಿವಿನ ನಷ್ಟ ಕಾಣಿಸಿಕೊಳ್ಳುತ್ತದೆ. ಇದನ್ನು ಸಿಬಿಸಿ, ಬ್ಲಡ್ ಕಲ್ಚರ್, ಟೈಫಾಯಿಡ್ ಐಜಿಎಂ, ವೈಡಲ್ ಪರೀಕ್ಷೆ ಮತ್ತು ಸಾಲ್ಮೊನೆಲ್ಲಾ ಪಿಸಿಆರ್ ಮೂಲಕ ಕಂಡುಹಿಡಿಯಲಾಗುತ್ತದೆ. ಟೈಫಾಯಿಡ್ನಿಂದ ದೂರವಿರಬೇಕೆಂದರೆ ಬೇಯಿಸದ ಆಹಾರ ಸೇವಿಸಬೇಡಿ. ಕೊಳಕು ಬೀದಿ ಬದಿಯ ತಿನಿಸುಗಳಿಂದ ದೂರವಿರಬೇಕು. ಫಿಲ್ಟರ್ ಮಾಡದ ನೀರನ್ನು ಕುಡಿಯಬೇಡಿ.
ಕಾಲರಾ
ಕಾಲರಾ ರೋಗ ಅತಿಸಾರ ಮತ್ತು ನಿರ್ಜಲೀಕರಣವನ್ನು ಉಂಟುಮಾಡುತ್ತದೆ. ಇದನ್ನು ಸ್ಟೂಲ್ ಕಲ್ಚರ್ ಮೂಲಕ ಕಂಡುಹಿಡಿಯಬಹುದು. ಈ ರೋಗವನ್ನು ತಪ್ಪಿಸಲು ಬೇಯಿಸದ ಆಹಾರ ಅಥವಾ ಕೊಳಕು ಬೀದಿ ಆಹಾರವನ್ನು ಸೇವಿಸಬೇಡಿ. ಫಿಲ್ಟರ್ ಮಾಡದ ನೀರನ್ನು ಕುಡಿಯಬಾರದು.