ಹೊರಗೆ ಊಟಕ್ಕೆ ಹೋದಾಗ ಮಕ್ಕಳು ಗಲಾಟೆ ಮಾಡೋದು ಮಾಮೂಲಿ. ಮಕ್ಕಳು ಗಲಾಟೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಹೊಟೇಲ್ ಗೆ ಹೋಗೋದನ್ನೇ ಬಿಡಲು ಸಾಧ್ಯವಿಲ್ಲ. ಮಕ್ಕಳು ಹಾಗೂ ಪಾಲಕರು ನೆಮ್ಮದಿಯಿಂದ ಕುಳಿತು ಆಹಾರ ಸೇವನೆ ಮಾಡುವಂತಹ ಜಾಗವನ್ನು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
ಕುಟುಂಬಸ್ಥರು ಬರುವಂತಹ ಹೊಟೇಲ್ ಆಯ್ಕೆ ಮಾಡಿಕೊಳ್ಳಿ. ಬಹುತೇಕ ಹೊಟೇಲ್ ನಲ್ಲಿ ಕುಟುಂಬಸ್ಥರಿಗೆ ಪ್ರತ್ಯೇಕ ಸ್ಥಳವಿರುತ್ತದೆ. ಅಲ್ಲಿ ಮಕ್ಕಳು ಗಲಾಟೆ ಮಾಡಿದ್ರೆ ನಿಮಗೆ ಮುಜುಗರವುಂಟಾಗುವುದಿಲ್ಲ. ನಿಮ್ಮಂತೆ ಇನ್ನೂ ಅನೇಕ ಕುಟುಂಬ ಅಲ್ಲಿರುವುದ್ರಿಂದ ಮಕ್ಕಳಿಗೆ ಶಾಂತವಾಗಿ ಊಟ ಮಾಡುವಂತೆ ಸಲಹೆ ನೀಡಬಹುದು.
ಕೆಲವೊಂದು ರೆಸ್ಟೋರೆಂಟ್ ಗಳಲ್ಲಿ ಮಕ್ಕಳು ಆಟವಾಡುವ ವ್ಯವಸ್ಥೆಯಿರುತ್ತದೆ. ಜೋಕಾಲಿ, ಸೀಸಾ, ಆಟಿಕೆಗಳಿರುವುದ್ರಿಂದ ನೀವು ಅಲ್ಲಿ ಆರಾಮವಾಗಿ ಹೆಚ್ಚು ಸಮಯ ಕಳೆಯಬಹುದಾಗಿದೆ.
ಕೆಲವೊಂದು ಕಡೆ ಮಕ್ಕಳನ್ನು ನೋಡಿಕೊಳ್ಳಲು ಸಹಾಯಕರಿರುತ್ತಾರೆ. ಅವರಿಗೆ ಪ್ರತ್ಯೇಕ ತರಬೇತಿ ನೀಡಿರಲಾಗಿರುತ್ತದೆ. ಅವರ ಬಳಿ ಮಕ್ಕಳನ್ನು ನೀಡಿ ನೀವು ಕುಟುಂಬಸ್ಥರ ಜೊತೆ ಸಮಯ ಕಳೆಯಬಹುದಾಗಿದೆ.
ಇನ್ನೂ ಕೆಲ ರೆಸ್ಟೋರೆಂಟ್ ನಲ್ಲಿ ಮಕ್ಕಳಿಗೆ ಬೇರೆ ಆಹಾರ ಹಾಗೂ ದೊಡ್ಡವರಿಗೆ ಬೇರೆ ಆಹಾರದ ವ್ಯವಸ್ಥೆಯಿರುತ್ತದೆ. ಅಲ್ಲಿ ನೀವು ಕಡಿಮೆ ಖಾರದ ಆಹಾರವನ್ನು ಮಕ್ಕಳಿಗೆ ನೀಡಬಹುದು. ಸಮಯ ಸಿಕ್ಕಾಗ ಇಂತ ಜಾಗಕ್ಕೆ ಮಕ್ಕಳನ್ನು ಕರೆದೊಯ್ಯಿರಿ.
ಮಕ್ಕಳು ಸಣ್ಣವರಾಗಿದ್ದರೆ ಬೇಬಿ ಬ್ಯಾಗ್ ತೆಗೆದುಕೊಂಡು ಹೋಗಿ. ಹಾಗೆ ಮಕ್ಕಳಿಗೆ ಆಟಿಕೆ, ಪ್ರತ್ಯೇಕವಾಗಿ ಒಂದೆರಡು ಬಟ್ಟೆ ಮತ್ತು ಅವರಿಗೆ ಬೇಕಾಗುವ ತಿಂಡಿ ಬ್ಯಾಗ್ ನಲ್ಲಿರಲಿ.
ಮನೆಯಲ್ಲಿ ಮಕ್ಕಳಿಗೆ ಶಿಸ್ತು ಕಲಿಸಿ. ಮಕ್ಕಳು ಮನೆಯ ಟೇಬಲ್ ಮೇಲೆ ಕುಳಿತು ತಿಂಡಿ ತಿನ್ನಬೇಕು ಎಂಬುದನ್ನು ತಿಳಿ ಹೇಳಿ. ಹೊರಗೆ ಸುತ್ತಾಡುತ್ತ ಆಹಾರ ತಿನ್ನಿಸಬೇಡಿ. ಇದು ಹೊಟೇಲ್ ಗಳಿಗೆ ಹೋದಾಗ ನಿಮ್ಮ ನೆರವಿಗೆ ಬರುತ್ತದೆ.