ಬೆಂಗಳೂರು: ನಿವೇಶನ ಖರೀದಿಸಿ ಐದು ವರ್ಷ ಕಳೆದರೂ ಮನೆ ಕಟ್ಟಿಕೊಳ್ಳದೆ ಖಾಲಿ ಬಿಟ್ಟಿರುವ ನಿವೇಶನಗಳ ಮೇಲೆ ಶೇಕಡ 25 ರಷ್ಟು ದಂಡ ವಿಧಿಸಲು ಬಿಡಿಎ ಚಿಂತನೆ ನಡೆಸಿದೆ.
ಬಿಡಿಎ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ನಿವೇಶನ ಖರೀದಿಸಿ ಐದು ವರ್ಷಗಳಲ್ಲಿ ಮನೆ ನಿರ್ಮಿಸಬೇಕು. ಐದು ವರ್ಷ ಕಳೆದರೂ ಮನೆ ನಿರ್ಮಿಸಿದ ನಿವೇಶನಗಳ ಮಾಲೀಕರಿಂದ ಮಾರ್ಗಸೂಚಿ ದರದ ಮೇಲೆ ದಂಡ ವಸೂಲಿ ಮಾಡಲಾಗುತ್ತದೆ.
2020ರ ಅಕ್ಟೋಬರ್ ನಲ್ಲಿ ಮಾರ್ಗಸೂಚಿ ದರದ ಮೇಲೆ ದಂಡ ವಸೂಲಿ ಮಾಡುವುದನ್ನು ಶೇಕಡ 10 ರಷ್ಟು ಹೆಚ್ಚಳ ಮಾಡಲಾಗಿತ್ತು. 20/30 ಅಳತೆಯ ನಿವೇಶನಕ್ಕೆ 5000ರೂ., 20/30 ರಿಂದ 30/40 ಸುತ್ತಳತೆಯ ನಿವೇಶನಕ್ಕೆ 15000 ರೂ., 30/40 ರಿಂದ 40/60 ಸುತ್ತಳತೆಯ ನಿವೇಶನಕ್ಕೆ 1.20 ಲಕ್ಷ ರೂ., 50/80 ಸುತ್ತಳತೆ ನಿವೇಶನಕ್ಕೆ 6 ಲಕ್ಷ ದಂಡ ನಿಗದಿಪಡಿಸಲಾಗಿತ್ತು. ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ಮುಂದಾಗಿರುವ ಬಿಡಿಎ ಇದೀಗ ನಿವೇಶನಗಳ ಸುತ್ತಳತೆ ಆಧಾರದಲ್ಲಿ ಖಾಲಿ ನಿವೇಶನಗಳಿಗೆ ಪಾವತಿಸುತ್ತಿರುವ ಮೊತ್ತವನ್ನು ಶೇ. 25ಕ್ಕೆ ಹೆಚ್ಚಳ ಮಾಡಲು ಚಿಂತನೆ ನಡೆಸಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಶೀಘ್ರದಲ್ಲೇ ದಂಡ ಶುಲ್ಕ ಪರಿಷ್ಕರಿಸಲಿದ್ದು, ದಂಡದ ಮೊತ್ತ ಶೇ. 25ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.