ಬೆಂಗಳೂರು: ಗಡಿ ಕಾಯುವ ಯೋಧರು ವೀರಮರಣ ಹೊಂದಿದಲ್ಲಿ ಅಥವಾ ತೀವ್ರ ಗಾಯಗೊಂಡ ಯೋಧರ ಕುಟುಂಬಕ್ಕೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಶಿಫಾರಸ್ಸಿನಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(BDA) ವತಿಯಿಂದ ಉಚಿತ ನಿವೇಶನ ನೀಡಲಾಗುತ್ತಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ಇಬ್ಬರು ವೀರ ಯೋಧರ ಕುಟುಂಬಗಳಿಗೆ ಸಾಂಕೇತಿಕವಾಗಿ ನಿವೇಶನ ಹಂಚಿಕೆ ಮಾಡಿದ್ದರು.
ಬೆಂಗಳೂರು ಮೂಲದ ಒಟ್ಟು 5 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ನಿರ್ಧರಿಸಲಾಗಿದ್ದು, ಇಂದು ಯೋಧರಾದ ಲ್ಯಾನ್ಸ್ ನಾಯಕ್ ನಾಗೇಂದ್ರಕುಮಾರ್ ಕೆ.ಎಂ. ಅವರ ತಾಯಿ ಸರೋಜಮ್ಮ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಆಯುಕ್ತ ರಾಜೇಶ್ ಗೌಡ ಹಾಗೂ ಕಾರ್ಯದರ್ಶಿ ಆನಂದ ಅವರು ಹಕ್ಕು ಪತ್ರ ವಿತರಿಸಿದರು.
ಇನ್ನುಳಿದ ಎರಡು ಕುಟುಂಬಗಳಿಗೆ ನೋಂದಾಯಿತ ಅಂಚೆಯ ಮೂಲಕ ಹಕ್ಕುಪತ್ರಗಳನ್ನು ತಲುಪಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.