ಬೆಂಗಳೂರು: ಬಿಡಿಎ ಬದಲಿ ನಿವೇಶನ ಪಡೆಯಲು ಯಾವುದೇ ಪ್ರಭಾವ ಬಳಸಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
17 ವರ್ಷಗಳ ಹಿಂದೆ ಬಿಡಿಎನಿಂದ ಮಂಜೂರಾಗಿದ್ದ ನಿವೇಶನವನ್ನು ವಿವಿಧ ಕಾರಣ ನೀಡಿ ಮಂಜೂರಾತಿ ಮಾಡಿಲ್ಲ. ಬಿಡಿಎ ಸೈಟ್ ವಾಪಸ್ ಪಡೆದಿದೆ ಎಂದು ಬಿಡಿಎ ಪರ್ಯಾಯ ನಿವೇಶನ ಮಂಜೂರಾತಿ ಕುರಿತಾಗಿ ಅವರು ಸ್ಪಷ್ಟಪಡಿಸಿದ್ದಾರೆ.
17 ವರ್ಷದಲ್ಲಿ ಮೂರು ಬಾರಿ ನೋಂದಣಿ ಸಂಬಂಧ ಶುಲ್ಕ ಪಾವತಿಸಿದ್ದರೂ, ಮನೆಕಟ್ಟಲು ಸಾಧ್ಯವಾಗಿಲ್ಲ. ಬಿಡಿಎ ನಿಯಮಾವಳಿಗಳ ಅನುಸಾರವೇ ನನಗೆ ನಿವೇಶನ ಮಂಜೂರಾತಿಯಾಗಿದೆ ಎಂದು ಪರಿಶೀಲಿಸಲು ಹೈಕೋರ್ಟ್ ನೇಮಿಸಿದ್ದ ನ್ಯಾಯಾಧೀಶ ಫಾರೂಕ್ ಸಮಿತಿ ಅಭಿಪ್ರಾಯಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ನನಗೆ ಈ ಹಿಂದೆ ಬೇರೆ ಶಾಸಕರು, ಸಚಿವರು ಮಂಜೂರಾತಿ ಪಡೆದ ರೀತಿಯಲ್ಲಿಯೇ ಬಿಡಿಎ ನಿವೇಶನ ಮಂಜೂರಾಗಿದೆ. ಬದಲಿ ನಿವೇಶನ ಮಂಜೂರು ಮಾಡಲು ಯಾವುದೇ ಪ್ರಭಾವ ಅಧಿಕಾರ ಬಳಸಿಲ್ಲ. ನಿಗದಿಪಡಿಸಿದ ಅಧಿಕ ಶುಲ್ಕವನ್ನು ಸಹ ನಾನು ಪಾವತಿಸಿದ್ದೇನೆ. ಅನೇಕರು ಬಿಡಿಎಯಿಂದ ನಿವೇಶನ ಮಂಜೂರಾತಿ ಪಡೆದು ನೋಂದಣಿ ಶುಲ್ಕ ಪಾವತಿಸಿದ್ದರೂ ನಿವೇಶನ ಪಡೆದುಕೊಂಡಿರಲಿಲ್ಲ. ನ್ಯಾಯಾಲಯದ ಆದೇಶದ ನಂತರ ಬಿಡಿಎ ಪರ್ಯಾಯ ನಿವೇಶನ ನೀಡಿ ಪರಿಹಾರ ಒದಗಿಸಿದೆ. ನಾನು ಮೂರು ಸಲ ಮಂಜೂರಾದ ನಿವೇಶನಕ್ಕೆ ನೋಂದಣಿ ಮಾಡಿದ್ದರೂ ನಿವೇಶನದ ಹಕ್ಕು ಪಡೆಯಲು ಇದುವರೆಗೂ ಸಾಧ್ಯವಾಗಿಲ್ಲ. ನ್ಯಾಯಕ್ಕಾಗಿ ನಾನು ಕೂಡ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.