
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA) ನಿವೇಶನ ಖರೀದಿಸಿದವರು ಮೂರು ವರ್ಷದೊಳಗೆ ಮನೆ ನಿರ್ಮಿಸಿಕೊಳ್ಳದಿದ್ದರೆ ಶೇಕಡ 25ರಷ್ಟು ದಂಡ ಪಾವತಿಸಬೇಕಾಗುತ್ತದೆ.
ಮನೆ ನಿರ್ಮಾಣ ಮಾಡಲು 5 ವರ್ಷವಿದ್ದ ಅವಧಿಯನ್ನು ಮೂರು ವರ್ಷಕ್ಕೆ ನಿಗದಿಪಡಿಸಲಾಗಿದ್ದು, ಮನೆ ನಿರ್ಮಿಸಿಕೊಳ್ಳದವರಿಗೆ ಮಾರ್ಗಸೂಚಿ ದರ ಆಧರಿಸಿ ದಂಡ ವಿಧಿಸಲಾಗುವುದು. ಹತ್ತು ವರ್ಷಗಳವರೆಗೆ ನಿವೇಶನ ಮಾರಾಟಕ್ಕೆ ಅವಕಾಶ ಇರಲಿಲ್ಲ. ಈಗ ನಿಯಮ ಸಡಿಲಗೊಳಿಸಿದ್ದು, ಯಾವಾಗ ಬೇಕಾದರೂ ನಿವೇಶನ ಮಾರಾಟ ಮಾಡಬಹುದು. ಆದರೆ, ಮೂಲ ಫಲಾನುಭವಿಗಳಿಂದ ನಿವೇಶನ ಖರೀದಿಸಿದವರು ಮಾರುಕಟ್ಟೆ ಮಾರ್ಗಸೂಚಿ ಅನ್ವಯ ಶೇಕಡ 25ರಷ್ಟು ದಂಡ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಹೇಳಲಾಗಿದೆ.
ನಿಗದಿತ ಅವಧಿಯಲ್ಲಿ ಮನೆ ಕಟ್ಟಿಕೊಳ್ಳದವರಿಗೆ ದಂಡ ವಿಧಿಸುವ ನಿಯಮವಿದ್ದರೂ ಸರಿಯಾಗಿ ಪಾಲನೆ ಆಗುತ್ತಿಲ್ಲ. ಸಾವಿರಾರು ನಿವೇಶನಗಳು ಖಾಲಿ ಉಳಿದಿವೆ. ಹೀಗಾಗಿ ಬಿಡಿಎ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲು ಮುಂದಾಗಿದೆ. ವಿವಿಧ ಬಡಾವಣೆಗಳಲ್ಲಿ ಬಿಡಿಎ ನಿವೇಶನ ಪಡೆದ ಗ್ರಾಹಕರು ಅನೇಕ ವರ್ಷಗಳಿಂದ ಮನೆ ಕಟ್ಟಿಕೊಳ್ಳದ ಕಾರಣ ನೂರಾರು ಎಕರೆ ಜಾಗ ಖಾಲಿ ಬಿದ್ದಿದೆ. ಪ್ರಾಧಿಕಾರದ 64 ಬಡಾವಣೆಗಳಲ್ಲಿ ಸುಮಾರು 73 ಸಾವಿರಕ್ಕೂ ಅಧಿಕ ನಿವೇಶನಗಳು ಖಾಲಿ ಉಳಿದಿದ್ದು, ನಿಗದಿತ ಐದು ವರ್ಷ ಅವಧಿಯೊಳಗೆ ಮನೆ ಕಟ್ಟದವರಿಗೆ ಶೇಕಡ 10ರಷ್ಟು ದಂಡ ವಿಧಿಸಲಾಗುತ್ತಿತ್ತು. ಈ ನಿಯಮವನ್ನು ಮೂರು ವರ್ಷಕ್ಕೆ ಕಡಿತಗೊಳಿಸಲಾಗಿದೆ. ಮೂರು ವರ್ಷದೊಳಗೆ ನಿವೇಶನ ಪಡೆದವರು ಮನೆ ನಿರ್ಮಿಸದಿದ್ದಲ್ಲಿ ಆಯಾ ಪ್ರದೇಶದ ಮಾರ್ಗಸೂಚಿ ದರದ ಅನ್ವಯ ಶೇಕಡ 25ರಷ್ಟು ದಂಡ ವಿಧಿಸಲು ತೀರ್ಮಾನಿಸಲಾಗಿದೆ.