
ಬೆಂಗಳೂರು: ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನಾವು ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.
ಎಸಿಬಿ ಅಧಿಕಾರಿಗಳ ದಾಳಿ ನಂತರದಲ್ಲಿ ಅವರು ಕೊಡುವ ವರದಿ ಮತ್ತು ಶಿಫಾರಸು ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಬಿಡಿಎನಲ್ಲಿ ಯಾರನ್ನೂ ರಕ್ಷಿಸುವ ಕೆಲಸವನ್ನು ನಾವು ಮಾಡುವುದಿಲ್ಲ. ಬಿಡಿಎ ಕುರಿತಂತೆ ಈಗಾಗಲೇ ನನಗೆ ಹಲವು ದೂರು ಬಂದಿದ್ದವು. ಭ್ರಷ್ಟಾಚಾರದ ಬಗ್ಗೆ ವಿಶ್ವನಾಥ್ ಅವರು ನನ್ನ ಗಮನಕ್ಕೆ ತಂದಿದ್ದರು. ಮುಖ್ಯವಾಹಿನಿಗೆ ಬಿಡಿಎ ತರುವ ವ್ಯವಸ್ಥೆ ಮಾಡಬೇಕಿದೆ. ಬಿಡಿಎ ಮೂಲಕ ನಾಗರಿಕ ಸೇವೆ ಸಮರ್ಪಕವಾಗಿಸುತ್ತೇವೆ ಎಂದು ಹೇಳಿದ್ದಾರೆ.
ಬಿಡಿಎ ಮೇಲೆ ಎಸಿಬಿ ದಾಳಿ ನಡೆದಿದೆ. ಯಾರನ್ನೂ ಕೂಡ ರಕ್ಷಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ ಸಿಎಂ, ಯಾವುದೇ ತಪ್ಪಿತಸ್ಥ ಅಧಿಕಾರಿ ಇದ್ದರೂ ಕೂಡ ಕ್ರಮಕೈಗೊಳ್ಳುವುದು ಖಚಿತ. ಎಸಿಬಿ ದಾಳಿ ಕುರಿತು ವರದಿ ಮತ್ತು ಶಿಫಾರಸು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.