ಮುಂಬೈ: ಈಗಾಗಲೇ ವಿರಾಟ್ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಬಿಸಿಸಿಐ ಕೆಳಗೆ ಇಳಿಸಿದೆ. ಕಾರಣ ಹೇಳದೆ, ಕೆಳಗಿಳಿಸಿದ್ದಕ್ಕೆ ಅಭಿಮಾನಿಗಳು ಕಾರಣ ಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡುತ್ತಿದ್ದಾರೆ. ಸದ್ಯ ಬಿಸಿಸಿಐ, ಕೊಹ್ಲಿ ನಾಯಕತ್ವದಿಂದ ಹಿಂದೆ ಸರಿದಿದ್ದಕ್ಕೆ ಮೌನ ಮುರಿದಿದೆ.
ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗೆ ಇಳಿದ ನಂತರ ಮೊದಲ ಬಾರಿಗೆ ಟ್ವೀಟ್ ಮಾಡಿರುವ ಬಿಸಿಸಿಐ, ಕೊಹ್ಲಿಗೆ ಧನ್ಯವಾದ ಹೇಳಿದೆ. ನಾಲ್ಕೂವರೆ ವರ್ಷಗಳ ಕಾಲ ಭಾರತ ತಂಡದ ನಾಯಕತ್ವ ವಹಿಸಿದ್ದ ವಿರಾಟ್ ಕೊಹ್ಲಿಗೆ ಬಿಸಿಸಿಐ ಕೇವಲ ಒಂದು ಸಾಲು ಬರೆದು ಅವರ ಸಾಧನೆ ಹಾಗೂ ಸೇವೆಗೆ ಧನ್ಯವಾದ ಅರ್ಪಿಸಿದೆ.
ಟ್ವೀಟ್ ಮಾಡಿರುವ ಬಿಸಿಸಿಐ, ತಾಳ್ಮೆ, ಉತ್ಸಾಹ ಮತ್ತು ದೃಢಸಂಕಲ್ಪದಿಂದ ತಂಡವನ್ನು ಮುನ್ನಡೆಸಿದ ನಾಯಕ ವಿರಾಟ್ ಕೊಹ್ಲಿಗೆ ಧನ್ಯವಾದಗಳು ಎಂದು ಬರೆದುಕೊಂಡಿದೆ. ಇದರೊಂದಿಗೆ ಕೊಹ್ಲಿ ನಾಯಕತ್ವದ ಗ್ರಾಫಿಕ್ಸ್ ನ್ನು ಹಂಚಿಕೊಳ್ಳಲಾಗಿದೆ.
ಮೂಲಗಳ ಪ್ರಕಾರ, ಏಕದಿನ ತಂಡದ ನಾಯಕತ್ವ ತ್ಯಜಿಸಲು ಬಿಸಿಸಿಐ, ವಿರಾಟ್ ಕೊಹ್ಲಿಗೆ 48 ಗಂಟೆಗಳ ಗಡುವು ನೀಡಿತ್ತು. ಆದರೆ, 24 ಗಂಟೆ ಕಳೆದರೂ ವಿರಾಟ್ ನಿರ್ಧಾರಕ್ಕೆ ಬಂದಿರಲಿಲ್ಲ. ಹೀಗಾಗಿ ನಾಯಕತ್ವದಿಂದ ವಜಾಗೊಳಿಸಿ, ರೋಹಿತ್ ಗೆ ಬಿಸಿಸಿಐ ಅವಕಾಶ ನೀಡಿದೆ ಎನ್ನಲಾಗುತ್ತಿದೆ.
ಟ್ವೆಂಟಿ-20 ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ತೆಗೆದು ಹಾಕಲು ಬಿಸಿಸಿಐ ಮುಂದಾಗಿರಲಿಲ್ಲ. ಆದರೆ, ಅವರೇ ಈ ನಿರ್ಧಾರ ಕೈಗೊಂಡಿದ್ದಾರೆ. ಟಿ20 ನಾಯಕತ್ವ ತ್ಯಜಿಸಿದ ನಂತರವೇ ಏಕದಿನ ಮಾದರಿಯ ನಾಯಕನನ್ನು ಬದಲಾಯಿಸಬೇಕಾಗಿತ್ತು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎಎನ್ಐ ಜೊತೆಗಿನ ಸಂವಾದದಲ್ಲಿ ಹೇಳಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 95 ಪಂದ್ಯಗಳನ್ನು ಆಡಿದ್ದಾರೆ, ಇವುಗಳಲ್ಲಿ 65 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದ್ದಾರೆ. ಕೇವಲ 27 ಸೋಲನ್ನು ಅನುಭವಿಸಿದೆ. ಅಲ್ಲದೇ, 19 ದ್ವಿಪಕ್ಷೀಯ ಸರಣಿಗಳಲ್ಲಿ 15ರಲ್ಲಿ ಗೆಲುವು ಸಾಧಿಸಲಾಗಿದೆ.