ಐಪಿಎಲ್ ಮೂಲಕ ಪ್ರಖ್ಯಾತಗೊಂಡ ಉದ್ಯಮಿ ಲಲಿತ್ ಮೋದಿ, ಬಿಸಿಸಿಐ ಜವಾಬ್ದಾರಿಯಲ್ಲಿದ್ದಾಗ ಆದ ಬೆಳವಣಿಗೆಯ ಮಾಹಿತಿಯನ್ನು ಈಗ ನೆನಪಿಸಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಾರಂಭದಿಂದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಸಂಪತ್ತನ್ನು ಅನೇಕ ಪಟ್ಟು ಹೆಚ್ಚಿಸಲು ತಾನು ಸಹಾಯ ಮಾಡಿದ್ದೇನೆ ಎಂದು ಲಲಿತ್ ಮೋದಿ ಧೈರ್ಯದಿಂದ ಹೇಳಿಕೊಂಡಿದ್ದಾರೆ. 2008 ರಲ್ಲಿ ಲಲಿತ್ ಮೋದಿ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ನ ಪ್ರಾರಂಭದ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. 2010 ರವರೆಗೆ ಐಪಿಎಲ್ಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮಾಜಿ ಐಪಿಎಲ್ ಚೇರ್ಮನ್ ಲಲಿತ್ ಹಾಗೂ ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರೊಂದಿಗಿನ ಸಂಬಂಧವನ್ನು ಘೋಷಿಸಿದ ನಂತರ ಕಳೆದೆರಡು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದ್ದಾರೆ.
ರಿಗ್ಗಿಂಗ್ ಬಿಡ್ಗಳು, ಆಡಳಿತ ಮಂಡಳಿಯ ಅನುಮೋದನೆಯಿಲ್ಲದೆ ನಿರ್ಧಾರಗಳನ್ನು ತೆಗೆದುಕೊಂಡಿರುವುದು, ಅಕ್ರಮ ಹಣ ವರ್ಗಾವಣೆ ಮತ್ತು ಬೆಟ್ಟಿಂಗ್ ಸೇರಿದಂತೆ ಒಟ್ಟು 8 ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ 2013 ರಲ್ಲಿ ಬಿಸಿಸಿಐನಿಂದ ಆಜೀವ ನಿಷೇಧಕ್ಕೊಳಗಾದ ಮಾಜಿ ಐಪಿಎಲ್ ಅಧ್ಯಕ್ಷರನ್ನು ಹಲವರು ಟ್ರೋಲ್ ಮಾಡಿದ್ದಾರೆ.
ಆದರೆ, ಅವರು ಇತ್ತೀಚೆಗೆ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಅನ್ನು ಹಂಚಿಕೊಂಡಿದ್ದು ತಾನು “ವಜ್ರದ ಚಮಚ’ದೊಂದಿಗೆ ಹುಟ್ಟಿದ್ದು, ‘ಯಾರಿಂದಲೂ ಲಂಚ ಪಡೆದಿಲ್ಲ’ ಎಂದಿದ್ದಾರೆ. ಭಾರತ ಸರ್ಕಾರದಿಂದ ಯಾವುದೇ ಫೇವರ್ ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ.
ತಮ್ಮ ಪೋಸ್ಟ್ನಲ್ಲಿ ಮೋದಿ ಅವರು ಬಿಸಿಸಿಐ ಜೊತೆಗಿನ ತಮ್ಮ ವ್ಯವಹಾರದ ಬಗ್ಗೆ ಹೇಳಿಕೊಂಡರು, ಭಾರತೀಯ ಕ್ರಿಕೆಟ್ ಮಂಡಳಿಯ ಬ್ಯಾಂಕ್ ಬ್ಯಾಲೆನ್ಸ್ 40 ಕೋಟಿ ರೂ. ಇತ್ತು, ತಮ್ಮನ್ನು ವಜಾ ಮಾಡಿದಾಗ 47,680 ಕೋಟಿ ರೂ. ಹೊಂದಿತ್ತು ಎಂದು ಹೇಳಿದ್ದಾರೆ.